This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ನಿಧನ

ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ನಿಧನ

ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ಅವರು ನಿಧನ ಹೊಂದಿದ್ದಾರೆ. ಕಲ್ಬುರ್ಗಿಯ ಅವರ ನಿವಾಸದಲ್ಲಿ ಅತ್ಯಂತ ಕ್ರೂರವಾದ ರೀತಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಮಾಹಿತಿ.
ಅವರಿಗೆ ನಮನಗಳು.

90ರ ದಶಕದ ಅಂತ್ಯದಲ್ಲಿ ನಾನು ಸಂಯುಕ್ತ ಕರ್ನಾಟಕ ಹಾಗೂ ಜನವಾಹಿನಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ರೆಡ್ಡಿಯವರು ವಿಧಾನ ಸೌಧಕ್ಕೆ ಡೆಕ್ಕನ್ ಹೆರಾಲ್ಡ್ ಪ್ರತಿನಿಧಿಯಾಗಿ ಬರುತ್ತಿದ್ದರು. ಮಿತಭಾಷಿಯಾಗಿದ್ದ ಅವರು ಉತ್ತಮ ಸ್ನೇಹ ಜೀವಿಯಾಗಿದ್ದರು. ನಂತರದಲ್ಲಿ ಡೆಕನ್ ಹೆರಾಲ್ಡ್ ತೊರೆದು ಜನವಾಹಿನಿ ಪತ್ರಿಕೆಯ ಕಲಬುರುಗಿ ವರದಿಗಾರರಾಗಿ ಕೆಲವು ಕಾಲ ಕಾರ್ಯ ನಿರ್ವಹಿಸಿದರು. ನಂತರ ಹಿಂದೂ ಪತ್ರಿಕೆಯ ವರದಿಗಾರರಾಗಿ ಅವರು ಕಾರ್ಯನಿರ್ವಹಿಸಿದ ನೆನಪು.

ಒಂದು ಕಾಲಘಟ್ಟದಲ್ಲಿ ಎಲ್ಲ ಪತ್ರಿಕೆಗಳಿಂದ ಹೊರಬಂದ ನಂತರ ಅವರು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದರು. ಬದುಕಿನ ದೈನಂದಿನ ಖರ್ಚು ವೆಚ್ಚಗಳಿಗೂ ಪರದಾಡುತ್ತಿದ್ದ ರೆಡ್ಡಿ ಕೊನೆಗೂ ಪರಿಸ್ಥಿತಿ ಎದುರಿಸಲಾಗದೆ ಆತ್ಮಹತ್ಯೆ ಮೂಲಕ ಬದುಕಿಗೆ ಅಂತಿಮ ವಿದಾಯ ಹೇಳಿದ್ದಾರೆ.

ರೆಡ್ಡಿಯವರ ಆತ್ಮಹತ್ಯೆ ಇಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಆಳುವ ಅರಸರ ಬೂಟು ನೆಕ್ಕುತ್ತಾ, ಅವರ ಭಜನೆಯಲ್ಲಿ ತಲ್ಲೀನರಾಗಿ ಐಶಾರಾಮಿ ಬದುಕು ನಡೆಸುತ್ತಿರುವ ಪತ್ರಕರ್ತರ ಮುಖವಾಡದ ಸೇಲ್ಸ್‍ಮನ್‍ಗಳ ನಡುವೆ ಪ್ರಾಮಾಣಿಕವಾಗಿ ದುಡಿವ ಪತ್ರಕರ್ತರು ನಿತ್ಯದ ಬದುಕು ಕಟ್ಟಿಕೊಳ್ಳಲು ಇಂದಿಗೂ ಹೆಣಗಾಡುತ್ತಿದ್ದಾರೆ.

ವೃತ್ತಿಧರ್ಮಕ್ಕೆ ಬದ್ದರಾಗಿ ಕೆಲಸ ಮಾಡುತ್ತಿರುವ ಅನೇಕ ಪತ್ರಕರ್ತರು ತಿಂಗಳ ಕೊನೆ ಆಯಿತೆಂದರೆ ಖರ್ಚುವೆಚ್ಚಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಬಹುತೇಕ ಸುದ್ದಿಮನೆಗಳಿಂದ ಹೊರಹಾಕಲ್ಪಟ್ಟಿರುವ ಅನೇಕ ಪತ್ರಕರ್ತರು ಬದುಕಿಗೆ ಪರ್ಯಾಯ ಮಾರ್ಗಗಳಿಲ್ಲದೆ ಪರದಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹಲವರು ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಮಂತ್ರಿಗಳು ಹಾಗೂ ಶಾಸಕರಿಗೆ ಬಹಿರಂಗವಾಗಿ ಗುಟ್ಟಾಗಿ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ಬದುಕುತ್ತಿದ್ದಾರೆ. ಅದರೆ ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಪತ್ರಕರ್ತರು ಬೀದಿಪಾಲಾಗಿದ್ದು ಸಂಕಷ್ಟಗಳ ನಡುವೆ ಮರ್ಯಾಯ ಮಾರ್ಗಗಳ ಅನ್ವೇಷಣೆಯಲ್ಲಿದ್ದಾರೆ.

ಜಿಲ್ಲಾ ಮಟ್ಟದ ಪತ್ರಕರ್ತರ ಪರಿಸ್ಥಿತಿಯಂತೂ ಇನ್ನೂ ಅಸಹನೀಯವಾಗಿದೆ. ಸಾಮಾಜಿಕ ಜಾಲತಾಣಗಳ ಪ್ರಾಬಲ್ಯ ಹೆಚ್ಚಿದ ನಂತರ ಜಿಲ್ಲಾ ಪತ್ರಕರ್ತರ ಕೆಲಸಕ್ಕೆ ಮಾನ್ಯತೆ ಇಲ್ಲದಂತಾಗಿದ್ದು ಮಾಧ್ಯಮ ಸಂಸ್ಥೆಗಳು ಅವರನ್ನು ಕೂಲಿಯಾಳುಗಳಂತೆ ನಡೆಸಿಕೊಳ್ಳುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.

ಉದ್ಯೋಗ ಕಳೆದುಕೊಂಡಿರುವ ಪತ್ರಕರ್ತರು ಕೆಲಸ ಹೋದ ಮಾತ್ರಕ್ಕೆ ಬದುಕು ಮುಗಿದೇ ಹೋಯಿತು ಎಂದುಕೊಳ್ಳಬೇಕಿಲ್ಲ. ಈಗಿನ ಸನ್ನಿವೇಶದಲ್ಲಿ ಬದುಕಲು ನೂರೆಂಟು ಪರ್ಯಾಯ ಮಾರ್ಗಗಳಿವೆ. ಅಸ್ಥಿರತೆಯಿಂದ ಕುಸಿದು ಹೋಗಬೇಕಾಗಿಲ್ಲ. ಆತ್ಮ ವಿಶ್ವಾಸದಿಂದ ಹೊಸ ಹುಡುಕಾಟದತ್ತ ಗಮನಹರಿಸಬೇಕು. ಈ ದಿಸೆಯಲ್ಲಿ ಪತ್ರಕರ್ತರ ಹಿತರಕ್ಷಣೆ ಮಾಡುವ ಸಂಘ ಸಂಸ್ಥೆಗಳು ಕೆಲಸ ಮಾಡಬೇಕು. ನಿರಾಶರಾಗಿರುವ ಪತ್ರಕರ್ತರ ಬದುಕಿನಲ್ಲಿ ಭರವಸೆ ಮೂಡಿಸುವ ಕೆಲಸ ಆಗಬೇಕು.

*ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಜಾನ್ ಮಥಾಯ್ಸ್ ಅವರ ಎಫಿ ಬಿ ವಾಲ್ ನಿಂದ ಪ್ರಾಮಾಣಿಕ ಪತ್ರಕರ್ತರ ನೈಜ ಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ.

*

Nimma Suddi
";