ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ 7 ಜನರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಅಲ್ಲದೆ, ಅವರ ವಾಯ್ಸ್ ರೆಕಾರ್ಡ್ ಕೂಡಾ ಸಂಗ್ರಹ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚಿಸಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಇನ್ನೂ ಕೈಸೇರಿಲ್ಲ. ಆದಷ್ಟು ಬೇಗ ವರದಿಯನ್ನು ಕೊಡಿ ಎಂದು ಹೇಳಿದ್ದು, ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದಂತೆ ಕೇವಲ ಒಂದು ವಿಡಿಯೋ ಮಾತ್ರವಲ್ಲ, ಹಲವು ವಿಡಿಯೋಗಳು ಇವೆ. ಇದೆಲ್ಲವನ್ನು ಪರಿಶೀಲನೆ ಮಾಡಬೇಕಿದೆ ಎಂದರು.
ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಅದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ. ಆದರೆ ಈವರೆಗೆ ಎಫ್‌ಎಸ್‌ಎಲ್ ವರದಿ ನಮ್ಮ ಕೈ ಸೇರಿಲ್ಲ ಇದೇ ಸಂದರ್ಭದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಆಯೋಗದ ಅಧ್ಯಕ್ಷರು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ವಿಚಾರವಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ಅದರ ನಿರ್ಧಾರದಂತೆ ಮುಂದಕ್ಕೆ ಹೋಗೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎಂದರು.
ಇದನ್ನು ಎರಡು ಸದನದ ಮುಂದೆ ಮಂಡಿಸಬೇಕೋ? ಅಥವಾ ಸರ್ಕಾರ ಘೋಷಣೆ ಮಾಡಬೇಕೋ ಎಂಬ ಬಗ್ಗೆ ಕ್ಯಾಬಿನೆಟ್ ನಿರ್ಧಾರ ಕೈಗೊಳ್ಳಲಿದೆ. ಕ್ಯಾಬಿನೆಟ್ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.