ಬಾಗಲಕೋಟೆ
ಮಾನವ ಜನ್ಮ ಶ್ರೇಷ್ಠವಾಗಿದ್ದು, ಎಚ್ಚರ ಹಾಗೂ ತಾಳ್ಮೆಯಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೃಷ್ಣಾ.ಟಿ., ಹೇಳಿದರು.
ಜಿಲ್ಲೆಯ ಅಮೀನಗಡ ಪಟ್ಟಣದ ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ಘಟದಿಂದ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಬಿರಾರ್ಥಿಗಳು ಇದೀಗ ಮರುಜನ್ಮ ಪಡೆದಿದ್ದು, ಈ ಹಿಂದೆ ನಿಮ್ಮಲ್ಲಿದ್ದ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ. ಎಚ್ಚರಿಕೆ ವಹಿಸಿ ಸಮರ್ಪಣಾ ಭಾವದಿಂದ ಸ್ವೀಕರಿಸಿ ಕುಟುಂಬ ಹಾಗೂ ಸಮಾಜಕ್ಕೆ ನ್ಯಾಯ ಕೊಡುವ ವ್ಯಕ್ತಿ ಹಾಗೂ ಶಕ್ತಿಯಾಗಿ ಬೆಳೆಯಿರಿ ಎಂದರು.
ಕಳೆದೊಂದು ವಾರದಿಂದ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ೬೧ ಶಿಬಿರಾರ್ಥಿಗಳಲ್ಲಿ ಇದೀಗ ಹೊಸ ಶಕ್ತಿ ಬಂದಿದೆ. ತಂಡದ ಮೊಗದಲ್ಲಿ ಮಂದಹಾಸ ಮೂಡಿದೆ. ಸಾವಧಾನ ಹಾಗೂ ಸಮಾಧಾನದಿಂದ ಇದ್ದು ಇತರರಿಗೆ ಪ್ರೇರಣೆ ಆಗಿ ಅವರೂ ಸಹ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಹೇಳಿದರು.
ಪ್ರಾದೇಶಿಕ ಯೋಜನಾಕಾರಿ ನಾಗೇಶ.ವೈ.ಎ., ಯೋಜನೆಯ ಜಿಲ್ಲಾ ನೂತನ ನಿರ್ದೇಶಕ ಚನ್ನಕೇಶವ, ಪಪಂ ಸದಸ್ಯ ಬಾಬು ಛಬ್ಬಿ, ವಿಜಯಕುಮಾರ ಕನ್ನೂರ, ಶಿಬಿರಾರ್ಥಿ ರಮೇಶ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ ಬಿಸಲದಿನ್ನಿ, ಸಿದ್ದಪ್ಪ ರಾಂಪೂರ, ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಅಶೋಕ ಚಿಕ್ಕಗಡೆ ಮಾತನಾಡಿದರು.
ಅಜ್ಮೀರ ಮುಲ್ಲಾ, ನಂದಪ್ಪ ಭದ್ರಶೆಟ್ಟಿ, ಮಲ್ಲೇಶಪ್ಪ ಹೊದ್ಲೂರ, ಶ್ರೀಶೈಲ ತತ್ರಾಣಿ, ಶಿಬಿರಾಕಾರಿ ವಿದ್ಯಾಧರ, ಆರೋಗ್ಯ ಸಹಾಯಕ ವೆಂಕಟೇಶ, ಜನಜಾಗೃತಿ ಮೇಲ್ವಿಚಾರಕ ಸಚಿನ, ಯೋಗಗುರು ಸಂಗಮೇಶ ಘಂಟಿ, ವೈದ್ಯಾಕಾರಿ ಡಾ.ಅರವಿಂದ, ತಾಲೂಕು ಯೋಜನಾಕಾರಿ ಸಂತೋಷ, ವಲಯ ಮೇಲ್ವಿಚಾರಕಿ ಪವಿತ್ರಾ ಇತರರು ಇದ್ದರು.
“ಚಟ ಒಂದು ಅಂಟುರೋಗ, ಅದು ನಂಟಾಗದಂತೆ ಎಚ್ಚರಿಕೆ ವಹಿಸಿ. ಕುಡಿತ ಚಟ ಬಿಟ್ಟು ನೆಮ್ಮದಿಯ ಜೀವನ ನಡೆಸಿ. ಮಕ್ಕಳ ಭವಿಷ್ಯ ಉಜ್ವಲಗೊಳಿಸಿ.”
-ಶಿವಕುಮಾರ ಹಿರೇಮಠ, ಸಮಾಜ ಸೇವಕ.