ಬೆಂಗಳೂರು
ಈ ಬಾರಿಯ ಗಣೇಶೋತ್ಸವ ಆಚರಣೆ ಕುರಿತು ಜನರಲ್ಲಿ ಗೊಂದಲವಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಜ್ಯೋತಿಷಿ ದಿಲೀಪ ದೇಶಪಾಂಡೆ ಈ ಕೆಳಗಿನಂತೆ ಉಲ್ಲೆಖಿಸಿದ್ದಾರೆ.
ಭಾರತದಲ್ಲಿ ಯಾವುದೇ ಜಾತಿ, ಮತ, ಪಂಥಗಳ ಬೇಧಭಾವವಿಲ್ಲದೆ ಅತ್ಯಂತ ವೈಭವದಿಂದ ಆಚರಿಸುವ ಹಬ್ಬವೆಂದರೆ ಗಣೇಶ ಚತುರ್ಥಿ ಹಬ್ಬವಾಗಿದೆ. ಸಕಲ ವಿಘ್ನಗಳನ್ನು ನಿವಾರಿಸುವ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ , ಆಯುಷ್ಯ ,ಆರೋಗ್ಯ , ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ.
ವಿಘ್ನ ವಿನಾಯಕನ ಹಬ್ಬವು ಪ್ರತಿವರ್ಷ ಭಾದ್ರಪದ ಶುಕ್ಲ ಚತುರ್ಥಿ ತಿಥಿಯಂದು ಬರುತ್ತದೆ . ಈ ವರ್ಷ ಚತುರ್ಥಿ ತಿಥಿಯು ಎರಡು ದಿನ ಬಂದಿರುವದು, ಅಂದರೆ ತಿಥಿಯು 18/09/2023 ಮತ್ತು 19/09/2023 ರಂದು ಬಂದಿರುವದರಿಂದ ಯಾವ ದಿನ ವಿನಾಯಕ ಚತುರ್ಥಿ ಹಬ್ಬವನ್ನು ಆಚರಿಸಬೇಕೆಂದು ಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ. ಅಷ್ಟೇ ಎಲ್ಲ ಕೆಲವು ಪಂಚಾಂಗ ಮತ್ತು ಕ್ಯಾಲೆಂಡರಗಳಲ್ಲಿ 18ನೆ ತಾರೀಖ ಕೊಟ್ಟಿದ್ದರೆ, ಇನ್ನು ಕೆಲುವು ಪಂಚಾಂಗ ಮತ್ತು ಕ್ಯಾಲೆಂಡರಗಳಲ್ಲಿ 19ನೆ ತಾರೀಖ ಕೊಟ್ಟಿದ್ದಾರೆ. ಹೀಗಾಗಿ ಜನ ಸಾಮಾನ್ಯರಲ್ಲಿ ಇನ್ನು ಹೆಚ್ಚಿನ ಗೊಂದಲ ಉಂಟಾಗಿದೆ. ಹೀಗಾಗಿ ಶಾಸ್ತ್ರೀಯವಾಗಿ ಗಣೇಶನ ಹಬ್ಬದ ದಿನವನ್ನು ನಿರ್ಣಯಿಸುವ ಒಂದು ಪ್ರಯತ್ನ ಇಲ್ಲಿ ಮಾಡಲಾಗಿದೆ.
ಗಣೇಶ ಚತುರ್ಥಿಯು ಪ್ರತಿ ವರ್ಷದ ಭಾದ್ರಪದ ಚತುರ್ಥಿಯಂದು ಆಚರಿಸಲ್ಪಡುತ್ತದೆ. ಆದರೆ ಚತುರ್ಥಿ ತಿಥಿಯು ಎರಡು ದಿನಬಂದಾಗ ಶಾಸ್ತ್ರಗಳ ನಿರ್ಣಯ ಹೀಗಿದೆ –
” ಶುಕ್ಲಚತುರ್ಥ್ಯ ಸಿದ್ಧಿವಿನಾಯಕ ವೃತಂ, ಸಾ ಮಧ್ಯಾನ್ಹವ್ಯಾಪಿನಿ ಗ್ರಾಹ್ಯಮ್. ದಿನದ್ವಯೇ ಸಾಕಲ್ಯೇನ ಮಧ್ಯಾನಹೆ ವ್ಯಾಪ್ತಾಬವ್ಯಾಪ್ತವ ವಾ ಪೂರ್ವಾ. ದಿನದ್ವಯೇ ಸಾಮ್ಯೇನ ವೈಶಮಯೇಣ ಏಕದೇಶ ವ್ಯಾಪ್ತಾವಪಿ ಪೂರ್ವವೈವ .”
ಸರಳ ಅರ್ಥ – ಭಾಧ್ರಪದ ಶುಕ್ಲ ಚತುರ್ಥಿಯಂದು ಸಿದ್ಧಿವಿನಾಯಕ ಹಬ್ಬವನ್ನು ಆಚರಿಸಬೇಕು. ಆ ಚತುರ್ಥಿಯು ಮಧ್ಯಾಹ್ನ ವ್ಯಾಪಾಯಿನಿಯಾಗಿರಬೇಕು. ಎರಡು ದಿನ ಪೂರ್ಣ ಮಧ್ಯಾಹ್ನ ವ್ಯಾಪಿನಿ ಇರುವಾಗ ಅಥವಾ ಪೂರ್ಣ ಇಲ್ಲದಿರುವಾಗ ಪೂರ್ವ ದಿನವನ್ನೇ ಪರಿಗಣಿಸಬೇಕು. ಎರಡು ದಿನ ಸಮ ಅಥವಾ ವೈಷಮ್ಯ ತಿಥಿ ಇರುವಾಗಲೂ ಸಹ ಪೂರ್ವ ದಿನವನ್ನೇ ಪರಿಗಣಿಸಬೇಕು.
ಇನ್ನು ಮುಂದುವರೆದು – “ಚತುರ್ಥಿ ಗಣೇಶವೃತಾತಿರಿಕ್ತೋ ಉಪವಾಸ ಕಾರ್ಯೆ ಪಂಚಮಿ ಯುಕ್ತ ಗ್ರಾಹ್ಯ …..ತೃತೀಯ ಯೋಗ ಪ್ರಶಸ್ತಮ್ “
ಅಂದರೆ ಗಣೇಶ ಚತುರ್ಥಿ ಅತಿರಿಕ್ತ ಕಾರ್ಯಗಳಿಗೆ ಪಂಚಮಿಯುಕ್ತ ಚತುರ್ಥಿಯು ಗ್ರಾಹ್ಯವು ಆದರೆ ಗಣೇಶ ಚತುರ್ಥಿಗೆ ಮಾತ್ರ ತೃತೀಯಯುಕ್ತ ಚತ್ರುಥಿಯೇ ಪ್ರಶಸ್ತ ಎಂದಿದ್ದಾರೆ.
ಹೀಗೆ ಶಾಸ್ತ್ರಗಳ ವಚನದ ಅನುಸಾರ ಮಧ್ಯಾನವ್ಯಾಪಿನಿ ಚತುರ್ಥಿ ತಿಥಿಯನ್ನೇ ಪರಿಗಣಿಸಬೇಕು ಮತ್ತು ತಿಥಿ ಎರಡು ದಿನ ಮಧ್ಯಾಹ್ನ ವ್ಯಾಪಿನಿ ಇದ್ದಾಗ ಪೂರ್ವದಿನವನ್ನೇ ಗ್ರಹಿಸಬೇಕು ಎಂದಿದ್ದಾರೆ. ಜೊತೆಗೆ ತೃತೀಯಾ ಯುಕ್ತ ಚತುರ್ಥಿಯೇ ಪ್ರಶಸ್ತ ಹೊರತು ಪಂಚಮಿಯುಕ್ತ ಚತುರ್ಥಿ ಅಲ್ಲ ಎಂದು ಸ್ಪಷ್ಟವಾಗಿ ಆದೇಶ ಕೊಟ್ಟಿದ್ದಾರೆ.
ಶಾಸ್ತ್ರಗಳಲ್ಲಿ ದಿನಮಾನವನ್ನು 5 ಭಾಗಮಾಡಿ , ಅದರ 3ನೆ ಭಾಗವನ್ನು ಮಧ್ಯಾಹ್ನ ಕಾಲ ಎನ್ನುತ್ತಾರೆ. ಈ ನಿಯಮ ಅನುಸಾರ 12 ಘಂಟೆಯ ದಿನಮಾನವನ್ನು 5ಭಾಗ ಮಾಡಿದಾಗ 1 ಭಾಗಕ್ಕೆ ಸುಮಾರು 2ಘಂಟೆ 24 ನಿಮಿಷ ಬರುತ್ತದೆ, ಅಂದರೆ ಸೂರ್ಯೋದಯದಿಂದ 4ಘಂಟೆ 48 ನಿಮಿಷಕ್ಕೆ ಮಧ್ಯಾಹ್ನ ಕಾಲ ಪ್ರಾರಂಭವಾಗಿ 7ಘಂಟೆ 32ನಿಮಿಷಕ್ಕೆ ಮುಗಿಯುತ್ತದೆ.
ಇನ್ನು 2023ರ ಗಣೇಶ ಚತುರ್ಥಿ ವಿಷಯವಾಗಿ ಬಂದಾಗ ಸೂರ್ಯಸಿದ್ಧಾಂತ ಅನುಸಾರಿ ಎಲ್ಲ ಪಂಚಾಂಗಗಳು 18ನೆ ತಾರೀಖ ವಿನಾಯಕ ಚತುರ್ಥಿ ಎಂದು ಹೇಳಿದರೆ, ದ್ರಿಕ ಪಂಚಾಂಗಗಳು 19ನೆ ತಾರಿಖ್ ವಿನಾಯಕ ಚತುರ್ಥಿ ಎಂದು ಹೇಳುತ್ತವೆ. ಈಗ ಮೇಲೆ ಹೇಳಿದ ಶಾಸ್ತ್ರೀಯ ವಚನಾನುಸಾರ ಒಂದೊಂದಾಗಿ ವಿವೇಚನೆ ಮಾಡೋಣ.
1. *ಸೂರ್ಯಸಿದ್ಧಾಂತ ಪಂಚಾಗ* – ಇವರ ಪ್ರಕಾರ 18ನೆ ತಾರೀಖ ಚತುರ್ಥಿ ಬರುತ್ತದೆ. ಸಿದ್ಧಾಂತಿಯ ಪಂಚಾಂಗಳ ಪ್ರಕಾರ – ಚತುರ್ಥಿ ತಿಥಿಯು ದಿನಾಂಕ್ 18/09/2023 ರಂದು ಬೆಳ್ಳಿಗೆ 9.59ಕ್ಕೆ ಪ್ರಾರಂಭವಾಗಿ 19/09/2023 ರಂದು ಬೆಳಿಗ್ಗೆ 10.28ಕ್ಕೆ ಸಮಾಪ್ತಿಯಾಗುತ್ತದೆ. ಇಲ್ಲಿ 18ನೆ ದಿನದಂದು ಮಾತ್ರ ಚತುರ್ಥಿ ಮಧ್ಯಾಹ್ನ ವ್ಯಾಪಿನಿಯಾಗುವದರಿಂದ 18ನೆ ತಾರೀಖ ವಿನಾಯಕ ಚತುರ್ಥಿ ಆಚರಣೆ ಅತ್ಯಂತ ಪ್ರಾಶ್ಯಸ್ತವಾಗುತ್ತದೆ.
೨. *ದ್ರಿಕ್ ಪಂಚಾಂಗ* – ದ್ರಿಕ ಪಂಚಾಂಗಗಳ ಪ್ರಕಾರ ಚತುರ್ಥಿ ತಿಥಿಯು ದಿನಾಂಕ್ 18/09/2023 ರಂದು 12.40ಕ್ಕೆ ಪ್ರಾರಂಭವಾಗಿ ದಿನಾಂಕ 19/09/2023ರ 1.48(13.48)ಕ್ಕೆ ಪೂರ್ಣವಾಗುತ್ತದೆ.
ಇಲ್ಲಿ ಶಾಸ್ತ್ರೀಯವಾಗಿ ನೋಡಲಾಗಿ 18ನೆ ತಾರೀಖ ಚತುರ್ಥಿ ಮಧ್ಯಾನವ್ಯಾಪಿನಿಯಾಗಿದೆ. 18ನೆ ತಾರೀಖ ಸೂರ್ಯೋದಯವು 6.09ಕ್ಕೆ ಮತ್ತು ಸೂರ್ಯಾಸ್ತವು 6.19ಕ್ಕೆ ಇರುವದರಿಂದ ಮಧ್ಯಾಹ್ನ ಕಾಲವು 11.01ರಿಂದ 01.27ರವರೆಗೆ ಬರುತ್ತದೆ. ಹೀಗಾಗಿ ಶಾಸ್ತ್ರವಚನಗಳ ಪ್ರಕಾರ 18ನೆ ತಾರೀಖ ಚತುರ್ಥಿಯು ಮಧ್ಯಾನವ್ಯಾಪಿನಿ ಯಾಗುತ್ತದೆ ಹಾಗು ಶಾಸ್ತ್ರಗಳ ಪ್ರಕಾರ ತೃತೀಯೆಯುಕ್ತ ಪೂರ್ವದಿನ ಬರುತ್ತದೆ. ಹೀಗೆ ದ್ರಿಕ್ ಗಣಿತದ ಪ್ರಕಾರ ನೋಡಲಾಗಿಯೂ ಸಹ 18ನೆ ತಾರೀಖೆ ಗಣೇಶ ಚತುರ್ಥಿ ಬರುತ್ತದೆ.
ಒಟ್ಟಾರೆ ಸೂರ್ಯಸಿದ್ಧಾಂತ ಮತ್ತು ದ್ರಿಕ ಗಣಿತ ಪಂಚಾಂಗಗಳ ಪ್ರಕಾರವಾಗಿ 18ನೆ ತಾರೀಖಿನಂದು ಗಣೇಶ ಚತುರ್ಥಿ ಸಿದ್ಧವಾಗುತ್ತದೆ. ಹೀಗಾಗಿ ಎಲ್ಲರು 18/09/2023ರಂದೇ ಗಣೇಶ ಚತುರ್ಥಿ ಆಚರಿಸುವದು ಶಾಸ್ತ್ರೀಯವಾಗಿ ಸೂಕ್ತವಾಗಿದೆ.
*ದಿಲೀಪ ದೇಶಪಾಂಡೆ*
*ಕೆಂಗೇರಿ , ಬೆಂಗಳೂರು*