ನಿಮ್ಮ ಸುದ್ದಿ ಬಾಗಲಕೋಟೆ
ಮಾನವ ಹಕ್ಕುಗಳನ್ನು ಗೌರವಿಸುವದರ ಜೊತೆಗೆ ಅವುಗಳಿಗೆ ಉಲ್ಲಂಘನೆಯಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಹೇಳಿದರು.
ನವನಗರದ ಜಿಲ್ಲಾ ಕಾರಾಗೃಹದಲ್ಲಿಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ಸೌಲಭ್ಯಗಳು ಕೂಡಾ ಹಕ್ಕುಗಳಾಗಿ ಪರಿಣಮಿಸಿವೆ ಎಂದು ತಿಳಿಸಿದರು.
ಮಾನವ ಸಮಾಜದಲ್ಲಿ ಗೌರಯುತವಾಗಿ ಬದುಕು ನಡೆಸಲು ಸಂವಿಧಾನವು ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯಿಂದ ಜೀವಿಸಲು ವಿವಿಧ ಮೂಲಭೂತ ಹಕ್ಕುಗಳನ್ನು ನೀಡಿದೆ. ಅವೆಲ್ಲವುಗಳನ್ನು ಅನುಭವಿಸುವದರ ಜೊತೆಗೆ ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸವಾಗಬಾರದು. ಮೊದಲು ನಾವು ಮಾನವನಾಗುವದನ್ನು ಕಲಿಯಬೇಕು ಅಂದಾಗ ಮಾತ್ರ ಸಮಾನತೆಯ ನ್ಯಾಯದಡಿ ಜೀವಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ವ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ಕರಣಿ ಮಾತನಾಡಿ ವ್ಯಕ್ತಿಗಳ ತುಳಿತ, ಶೋಷಣೆ ಮತ್ತು ಅನ್ಯಾಯಗಳಿಂದ ರಕ್ಷಿಸುವ ಪ್ರಯತ್ನ ಮಾನವ ಹಕ್ಕುಗಳ ಪರಿಕಲ್ಪಣೆಯಾಗಿದ್ದು, ಮಾನವ ಹಕ್ಕುಗಳ ಕುರಿತು ಜಗತ್ತಿನಾದ್ಯಂತ ಎಲ್ಲರೂ ಇದರ ಬಗ್ಗೆ ಸಮಾನ ಕಾಳಜಿ ತೋರುತ್ತಿದೆ. ಇವುಗಳಿಗೆ ಕಾನೂನಿನ ರಕ್ಷಣೆಯು ಸಹ ದೊರೆಯುತ್ತಿದ್ದು, ಮಾನವ ಹಕ್ಕುಗಳನ್ನು ರಕ್ಷಿಸುವದರ ಜೊತೆಗೆ ಮಾನವೀಯತೆಯಿಂದ ಬದುಕುವ ಅಗತ್ಯವಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲರಾದ ಟಿ.ಆರ್.ಕುಲಕರ್ಣಿ ಮಾತನಾಡಿ ಕಾನೂನಿನಡಿ ಎಲ್ಲರೂ ಸಮಾನರಾಗಿದ್ದು, ಕಾನೂನು ಪರಿಸರದ ಜೊತೆಗೆ ಹಕ್ಕುಗಳ ರಕ್ಷಣೆ ಅಗತ್ಯವಾಗಿದೆ. ಸಂವಿಧಾನ ನಮಗೆ ಜೀವಿಸುವ ಹಕ್ಕು, ಸಮಾನತೆ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ದವಾದ ಹಕ್ಕು ಸೇರಿದಂತೆ ಇತರೆ ಹಕ್ಕುಗಳನ್ನು ನೀಡಿದ್ದು, ಅವುಗಳು ಉಲ್ಲಂಘನೆಯಾಗದಂತೆ ರಕ್ಷಣೆ ಮಾಡಿ ಸಮಾಜದಲ್ಲಿ ಆಯೋಗ್ಯದಂತ ಜೀವನ ನಡೆಸಬೇಕೆಂದು ತಿಳಿಸಿದರು. ಕಾನೂನು ಉಲ್ಲಂಘಿಸಿ ತಾವುಗಳು ಶಿಕ್ಷೆ ಅನುಭವಿಸುತ್ತಿದ್ದಿರಿ. ಶಿಕ್ಷೆ ಮುಗಿದ ನಂತರ ನ್ಯಾಯಯುತವಾಗಿ ಬದುಕುವದನ್ನು ಕಲಿಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕ ದತ್ತಾತ್ರೇಯ ಮೇದಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ವಿ.ಡಿ.ಕುಂಬಾರ, ಮುಖ್ಯ ವೀಕ್ಷಕರಾದ ಎಂ.ಜಿ.ಶಿಲೇದಾರ, ಜೆ.ಎಂ.ಸಿಂದಗಿಕರ, ಬಿ.ಎಂ. ಓದಿ, ವೀಕ್ಷಕ ಆರ್.ಎಸ್.ನಾಗರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭವದಲ್ಲಿ ಪಿ.ಪಿ.ಹಾದಿಮನಿ ಪ್ರಾರ್ಥನೆ ಗೀತೆ ಹಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪಿ.ಎಸ್.ಬಾದವಾಡಗಿ ಸ್ವಾಗತಿಸಿದರು. ಜಿಲ್ಲಾ ಕಾರಾಗೃಹದ ವೀಕ್ಷಕ ಜಗದೀಶ ಬೇಕಿನಾಳ ನಿರೂಪಿಸಿ ವಂದಿಸಿದರು.