ಬೆಂಗಳೂರು: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂಉರ್ನಿಯ ಪ್ಲೇ ಆಫ್ಸ್ ರೇಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರದಬ್ಬಿದ ದಿನದಿಂದಲೂ ಸಿಎಸ್‌ಕೆ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ನಾನಾ ರೀತಿಯಲ್ಲಿ ಆರ್‌ಸಿಬಿ ತಂಡವನ್ನು ಗೇಲಿ ಮಾಡಿ ಕಾಲೆಳೆಯುತ್ತಾ ಬಂದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಎಲಿಮಿನೇಟರ್ ಪಂದ್ಯ ಸೋತ ಬಳಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂಬಾಟಿ ರಾಯುಡು ವಿಡಿಯೋ ಒಂದನ್ನು ಹಂಚಿಕೊಂಡು ‘5 ಬಾರಿ ಚಾಂಪಿಯನ್ಸ್ ಯಾರು ಎಂಬುದನ್ನು ಕೆಲವೊಮ್ಮೆ ತೋರಿಸಿಕೊಡಬೇಕಾಗುತ್ತದೆ’ ಎಂದು ಅಡಿಬರಹ ಬರೆದಿದ್ದರು. ಅವರೊಟ್ಟಿಗೆ ಕೈ ಜೋಡಿಸಿದ್ದ ಸಿಎಸ್‌ಕೆ ಆಟಗಾರರಾದ ದೀಪಕ್ ಚಹರ್, ಮತೀಶ ಪತಿರಣ ಮತ್ತು ತುಶಾರ್ ದೇಶಪಾಂಡೆ ಕಾಮೆಂಟ್ ಬಾಕ್ಸ್‌ನಲ್ಲಿ ಆರ್‌ಸಿಬಿ ತಂಡವನ್ನು ಗೇಲಿ ಮಾಡಿದ್ದಾರೆ.
ಒಂದು ಹೆಜ್ಜೆ ಮುಂದಿಟ್ಟಿರುವ ಅಂಬಾಟಿ ರಾಯುಡು, ಆರ್‌ಸಿಬಿ ತಂಡ ಇಷ್ಟು ವರ್ಷ ಒಮ್ಮೆಯೂ ಟ್ರೋಫಿ ಗೆಲ್ಲದೇ ಇರುವುದಕ್ಕೆ ವಿರಾಟ್ ಕೊಹ್ಲಿ ಮತ್ತು ತಂಡದ ಆಟಗಾರರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದು, ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತನ್ನ ಕಡೇ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ಎದುರು 27 ರನ್‌ಗಳ ಭರ್ಜರಿ ಜಯ ದಾಖಲಿಸಿ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯಿತು.
ಬಳಿಕ ಆರ್‌ಸಿಬಿ ಅಭಿಮಾನಿಗಳು ಬೀದಿ ಬೀದಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದನ್ನು ಕಂಡ ಅಂಬಾಟಿ ರಾಯುಡುಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮುಗಿದು 6 ದಿನಗಳು ಕಳೆದಿದ್ದರೂ ಅಂಬಾಟಿ ರಾಯುಡುಗೆ ಆ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ.