ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಟಿವಿ9ಗೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದರು.
ಆರೋಪಿ ವಿಶ್ವ ಮೇ 15ರ ಮುಂಜಾನೆ 5.30ಕ್ಕೆ ಮನೆಗೆ ನುಗ್ಗಿ ಅಂಜಲಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಸದ್ಯ ಶೋಧ ನಡೆಸಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿಶ್ವ ಸ್ನೇಹಿತರ ಜೊತೆಗೆ ಬೈಕ್ ಕಳ್ಳತನ ಮಾಡುತ್ತಿದ್ದ. ಅಲ್ಲದೆ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡಿ, ಅವರ ಜೊತೆ ಪ್ರೀತಿ ನಾಟಕವಾಡಿ, ಬಳಿಕ ಅವರನ್ನು ಬಳಸಿಕೊಂಡು, ಯುವತಿರಿಂದ ಬಂಗಾರ, ಬೆಳ್ಳಿ, ಹಣ ಪಡೆದುಕೊಂಡು ಮೋಸ ಮಾಡಿರುವ ಪ್ರಕರಣಗಳು ಸಹ ಹೊರಬಂದಿವೆ.
ಅಂಜಲಿಗೆ ಇದೇ ರೀತಿ ಮಾಡುವ ಪ್ರಯತ್ನ ಮಾಡಿದ್ದಾನೆ. ಇದಕ್ಕೆ ಅಂಜಲಿ ಒಪ್ಪದಿದ್ದಾಗ, ಹತ್ಯೆ ಮಾಡಿ ಪೈಶಾಚಿಕತೆ ಮರೆದಿದ್ದಾನೆ. ಇನ್ನೂ ವಿಶ್ವನ ಅಪರಾಧ ಹಿನ್ನೆಲೆ ಬಗ್ಗೆ ಬೆಂಡಿಗೇರಿ ಪೋಲಿಸರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದರೂ ಅಂಜಲಿ ಪ್ರಕರಣದಲ್ಲಿ ಯಾಕೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು ಈಗ ಹಲವಾರು ಅನುಮಾನ ಹುಟ್ಟುಹಾಕುತ್ತಿದೆ.
ಆರೋಪಿ ವಿಶ್ವ ವೃತಿಯಲ್ಲಿ ಕಳ್ಳ. ಪ್ರವೃತಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ. ಮದ್ಯವ್ಯಸನಿ ಚಟಕ್ಕೆ ಬಲಿಯಾಗಿ ಕಳ್ಳತನ ಮಾಡಿ ಹಲವು ಸಲ ಸಿಕ್ಕಿ ಹಾಕಿಕೊಂಡಿದ್ದ. ಹಂತಕನ ಪತ್ತೆಗೆ ಎರಡು ಪೊಲೀಸ್ ಟೀಮ್ ರಚನೆ ಮಾಡಿದ್ದು, ಒಂದು ತಂಡ ಮೈಸೂರು ಹಾಗೂ ಮತ್ತೊಂದು ತಂಡ ದಾವಣಗೆರೆಯಲ್ಲಿ ಹುಡುಕಾಟ ನಡೆಸುತ್ತಿತ್ತು.
ಹತ್ಯೆ ಸ್ಥಳದ ಅಕ್ಕಪಕ್ಕದಲ್ಲಿನ ಮತ್ತು ಬಸ್ ನಿಲ್ದಾಣದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ವಿಶ್ವನ ಬಂಧನಕ್ಕೆ ಬಲೆ ಬೀಸಲಾಗಿತ್ತು. ಸದ್ಯ ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಅರೆಸ್ಟ್ ಆಗಿದ್ದಾನೆ. ಆರೋಪಿಯ ಬಳಿ ಯಾವುದೇ ಮೊಬೈಲ್ ಇರಲಿಲ್ಲ, ಕಳೆದ ಹದಿನೈದು ದಿನಗಳಿಂದ ವಿಶ್ವ ಅಲಿಯಾಸ್ ಗಿರೀಶ್ ಮೊಬೈಲ್ ಬಳಕೆ ಮಾಡಿಲ್ಲ. ಹಂತಕನನ್ನು ಹುಡುಕುವುದು ಪೊಲೀಸರಿಗೆ ಕಷ್ಟವಾಗಿತ್ತು ಎಂದು ಮಾಹಿತಿ ಕಂಡು ಬಂದಿದೆ.