ಗ್ರಾಮಗಳಲ್ಲಿ ಮನೆ ಮನೆ ಸರ್ವೇ ಕಾರ್ಯ
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಎರಡನೇ ಅಲೆ ನಗರದಿಂದ ಹಳ್ಳಿಯತ್ತ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಗ್ರಾಮ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವನಗರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರೈಕೆಯಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಅಲ್ಲಿಯ ರೋಗಿಗಳಿಗೆ ಕಾಲ ಕಾಲಕ್ಕೆ ತಪಾಸಣೆ, ಊಟದ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ ಕಳಸದ ಅವರು ರೋಗಿಗಳ ದಾಖಲಾತಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಬೀಳಗಿ ತಾಲೂಕಿನ ಅನಗವಾಡಿ, ಮನ್ನಿಕೇರಿ ಹಾಗೂ ಹೊನ್ನಿಹಾಳ ಗ್ರಾಮಗಳಿಗೆ ಭೇಟಿ ನೀಡಿದ ಕಳಸದ ಅವರು ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿಯೊAದಿಗೆ ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದರು. ಸಮೀಕ್ಷೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಮನೆ ಸದಸ್ಯರಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದಲ್ಲಿ ತಪಾಸಣೆ ಕೈಗೊಳ್ಳಬೇಕು. ಔಷಧ ಕಿಟ್ ವಿತರಿಸಲು ತಿಳಿಸಿದರು.
ಹೊನ್ನಿಹಾಳ ಗ್ರಾಪಂ ಕಚೇರಿಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ ಕೋವಿಡ್ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಕೆಮ್ಮು, ನೆಗಡಿ, ಜ್ವರ ಬಂದಲ್ಲಿ ನಿರ್ಲಕ್ಷ ವಹಿಸದೇ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಪ್ರಾರಂಭದಲ್ಲಿಯೇ ಕೋವಿಡ್ ಪತ್ತೆ ಹಚ್ಚಿದಲ್ಲಿ ಬೇಗನೇ ಗುಣಪಡಿಸಲು ಸಾಧ್ಯವಾಗುತ್ತದೆ. ಗ್ರಾಮದ ಜನರಲ್ಲಿ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದರು.
ಗ್ರಾಮಕ್ಕೆ ವಲಸಿಗರು ಬಂದಿದ್ದು, ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಕೋವಿಡ್ ಗ್ರಾಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ನರೇಗಾದಡಿ ಹೆಚ್ಚು ಹೆಚ್ಚು ಕಾಮಗಾರಿ ಕೈಗೊಂಡು ದುಡಿಯುವ ಜನರಿಗೆ ಉದ್ಯೋಗ ದೊರೆತು ಗ್ರಾಮದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಜಿಪಂ ಸಿಇಓ ಟಿ.ಭೂಬಾಲನ, ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಎಂ.ಗAಗಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಬಾಗಲಕೋಟೆ ತಾಪಂ ಇಓ ಕಲ್ಲಾಪೂರ, ಬೀಳಗಿ ಪ್ರಭಾರಿ ಇಓ ಕಾರ್ತಿಕ್, ತಾಲೂಕಾ ವೈದ್ಯಾಧಿಕಾರಿ ದಯಾನಂದ ಕರಿಯನ್ನವರ ಇತರರು ಇದ್ದರು.