ಬೆಂಗಳೂರು: ಭಾನುವಾರ ಮಧ್ಯಾಹ್ನದಿಂದ ಧಾರಾಕಾರವಾಗಿ ಸುರಿದ ಕೃತಿಕಾ ಮಳೆಗೆ ಸ್ಮಾರ್ಟ್‌ಸಿಟಿ ಬೆಂಗಳೂರಿನ ಬಣ್ಣ ಬಯಲಾಗಿದೆ. ಯಲಹಂಕದಲ್ಲಿಅಪಾರ್ಟ್‌ಮೆಂಟ್ ಜಲಾವೃತಗೊಂಡು ನಿವಾಸಿಗಳು ಪರದಾಡಿದರು. ಚರಂಡಿ, ರಾಜಕಾಲುವೆಗಳು ಉಕ್ಕೇರಿ ರಸ್ತೆಗಳು ಹೊಳೆಯಂತಾಗಿ ಮಾರ್ಪಟ್ಟಿದ್ದವು. ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರ ವ್ಯತ್ಯಯವಾಯಿತು.
ಯಲಹಂಕ ಉಪನಗರ ಹೊಯ್ಸಳ ಕ್ರೀಡಾಗಣದ ಹಿಂಭಾಗದ ರಸ್ತೆ ಕೆರೆಯಂತಾಗಿತ್ತು. ಯಲಹಂಕದ ಕನಕನಗರ ಸೇರಿದಂತೆ ಹಲವೆಡೆ ರಸ್ತೆಗಳು ಹೊಳೆಯಂತಾಗಿದ್ದವು. ಎಂಎಸ್ ಪಾಳ್ಯ ಬಳಿ ನೀರು ನಿಂತಿದ್ದರಿಂದ ಯಲಹಂಕ ಕಡೆಗೆ ಹೋಗುವ ವಾಹನಗಳು ನಿಧಾನಗತಿಯಲ್ಲಿಸಾಗಿದವು. ಯಲಹಂಕ ರೈಲ್ವೆ ಅಂಡರ್‌ಪಾಸ್ ಬಳಿ ನೀರು ನಿಂತು ನಗರ ಮತ್ತು ಏರ್‌ಪೋರ್ಟ್ ಕಡೆ ವಾಹನಗಳು ನಿಧಾನಗತಿಯಲ್ಲಿಸಾಗಿದವು. ಸಂಜಯನಗರ ಮುಖ್ಯ ರಸ್ತೆಯಲ್ಲಿಮರದ ಕೊಂಬೆ ಬಿದ್ದ ಕಾರಣ ನಾಗಶೆಟ್ಟಿಹಳ್ಳಿ ಮುಖ್ಯರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗೆ ಅಡಚಣೆಯುಂಟಾಗಿತ್ತು. ರಾಮಮೂರ್ತಿ ನಗರ-ಟಿನ್‌ಫ್ಯಾಕ್ಟರಿ ಮಾರ್ಗದಲ್ಲಿನೀರು ನಿಂತು ವಾಹನ ಸವಾರರು ಪರದಾಡಿದರು.
ರಾಜಕಾಲುವೆ ನೀರಿನ ವಾಸನೆಗೆ ನಿವಾಸಿಗಳು ಕಂಗಾಲಾದರು. ಕೆಲ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆಡೆಗೆ ತೆರಳಿದರು. ಮೋಟರ್ ಅಳವಡಿಸಿ, ಸಂಗ್ರಹವಾಗಿದ್ದ ನೀರನ್ನು ಹೊರ ಹಾಕಲು ರಾತ್ರಿಯಿಡೀ ಯತ್ನಿಸಿದರೂ ನೀರಿನ ಮಟ್ಟ ತಗ್ಗಲಿಲ್ಲ. ಬೆಳಗಾದ ಬಳಿಕ ನೀರಿನ ಪ್ರಮಾಣ ತಗ್ಗಿದರೂ ಭಾನುವಾರ ಮಧ್ಯಾಹ್ನ ಮತ್ತೆ ಮಳೆಯಾಗಿದ್ದರಿಂದ ಮತ್ತೆ ಸಮಸ್ಯೆ ಪುನರಾವರ್ತನೆಯಾಯಿತು. ಸಮಸ್ಯೆ ಕುರಿತು ಬಿಬಿಎಂಪಿಗೆ ಮನವರಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಪಾರ್ಟ್‌ಮೆಂಟ್ ಸುತ್ತಲಿನ ಸುಮಾರು 20ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಪರದಾಡುವಂತಾಗಿದೆ. ಪುಟ್ಟೇನಹಳ್ಳಿ ಕೆರೆ ಪಕ್ಕದಲ್ಲಿರುವುದರಿಂದ ಕೆರೆ ಸಂಪರ್ಕಿಸುವ ರಾಜಕಾಲುವೆಗಳಲ್ಲಿಭಾರಿ ಪ್ರಮಾಣದ ನೀರು ಹರಿದು ಬಂದು ಸಮಸ್ಯೆ ಉಂಟಾಯಿತು. ರಾಜಕಾಲುವೆ ಹೂಳು ತೆರವುಗೊಳಿಸದೆ ಇರುವುದು ಸಮಸ್ಯೆಗೆ ಮೂಲವಾಗಿದೆ.
ಶನಿವಾರ ರಾತ್ರಿ ಸುರಿದ ಮಳೆಗೆ ರಾಜಕಾಲುವೆ ಉಕ್ಕಿ ಹರಿದು ಯಲಹಂಕದ ನಾತ್‌ರ್‍ಹುಡ್ ಅಪಾರ್ಟ್‌ಮೆಂಟ್ ಸಂಪೂರ್ಣ ಜಲಾವೃತಗೊಂಡಿತು. ಇದರಿಂದಾಗಿ ನಿವಾಸಿಗಳು ಮನೆಯಿಂದ ಹೊರಬರದಂತಾಗಿ ಜಲದಿಗ್ಭಂಧನಕ್ಕೊಳಗಾದರು.