ಬೆಂಗಳೂರು: ನಮಗೆ ಹೋರಾಟ ಮೂಲಕ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಸೆಪ್ಟೆಂಬರ್ ನಲ್ಲಿ ಪರಿಹಾರದ ಮನವಿ ಕೊಟ್ಟಿದ್ವಿ. ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗಿತ್ತು. ರಾಜ್ಯದ ಮನವಿಯನ್ನು ಕೇಂದ್ರ ತಡ ಮಾಡಿತ್ತು. ಕೇಂದ್ರದ ಸಚಿವರನ್ನು ಭೇಟಿಮಾಡಿದ್ರು ಬಿಡುಗಡೆ ಮಾಡಿರಲಿಲ್ಲ ಎಂದರು.
ನಮಗೆ ಹೋರಾಟ ಮೂಲಕ ಬರ ಪರಿಹಾರ ಹಣ ಬಂದಿದೆ. ನಮಗೆ ಕಾನೂನು ಬದ್ಧವಾಗಿ ಬಂದಿರುವ ಹಣ ಇದು ಎಂದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಓಡಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದ್ರೆ ಯಾವುದೇ ಅಧಿಕೃತ ದೃಢೀಕರಣ ಆಗಿಲ್ಲ. ನಾವು ನೀರಿಕ್ಷೇಯಲ್ಲಿ ಇದ್ದೇವೆ. ಅಧಿಕೃತ ಆದೇಶ ಬರಬಹುದೆಂದು ಹೇಳಿದರು.
ನಾವು 18 ಸಾವಿರ ಕೋಟಿಗೆ ಮನವಿ ಸಲ್ಲಿಸಿದ್ವಿ. ಸಮಸ್ಯೆ ಗಂಭೀರ ಆಧಾರದ ಮೇಲೆ ಪರಿಹಾರ ಕೇಳಿದ್ವಿ.ಈಗ 3400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ಹಣ ಕೊಟ್ಟಿದ್ದಾರೆ. ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಾವು ಮನವಿ ಕೊಟ್ಟು ಏಳು ತಿಂಗಳು ಆಗಿತ್ತು. ಕರ್ನಾಟಕ ಮನವಿಗೆ ಗೌರವ ಕೊಡಲಿಲ್ಲ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ವಿ. ಕಾನೂನಿನ ಹೋರಾಟ ಮಾಡಬೇಕಾಯ್ತು. ರಾಜ್ಯದ ಮನವಿಯನ್ನು ಕೋರ್ಟ್ ಪ್ರಶ್ನೆ ಮಾಡಲಿಲ್ಲ. ನಾವು ಸಮಯಕ್ಕೆ ಸರಿಯಾಗಿ ಎಲ್ಲ ಮನವಿ ಮಾಡಿದ್ದೆವು ಎಂದರು.