ರಾಮನಗರ: ಕಾವೇರಿ ಜಲಾನಯನ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರು ಸ್ಪರ್ಧೆ ಮಾಡುತ್ತಿದ್ದು, ಜನರು ಎಲ್ಲಿ ಅವರನ್ನು ತಿರಸ್ಕರಿಸುತ್ತಾರೊ ಎಂಬ ಭಯದಿಂದ ದೇವೇಗೌಡರು ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದರು.
ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದೆವು. ಆಗ ದೇವೇಗೌಡರು ಬೆಂಬಲ ನೀಡಲಿಲ್ಲ. ಈಗ ತಮ್ಮ ಕುಟುಂಬದವರ ಸೋಲಿನ ಭೀತಿಯಿಂದ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳುತ್ತಿದ್ದಾರೆ. ದೇವೇಗೌಡರೇ ಈ ಜನರು ದಡ್ಡರಲ್ಲ. ನಿಮ್ಮನ್ನು, ಕುಮಾರಣ್ಣನವರನ್ನು ನೋಡಿದ್ದಾರೆ. ಇಂದು ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ನಾನು ನೀರಾವರಿ ಹಾಗೂ ಬೆಂಗಳೂರಿನ ಜವಾಬ್ದಾರಿ ತೆಗೆದುಕೊಂಡಿರುವುದೇ ಈ ಯೋಜನೆ ಮಾಡಿ ಇತಿಹಾಸ ಸೃಷ್ಟಿಸಲು. ಈ ಯೋಜನೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿಯನ್ನು ಗುರುತಿಸಿ ಸರ್ವೇ ಮಾಡಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜನರಿಗೂ ಪ್ರಯೋಜನವಾಗಲಿದೆ. ಯಾರು ಬೆಂಬಲ ನೀಡುತ್ತಾರೋ ಇಲ್ಲವೋ ನಾವಂತೂ ಈ ಯೋಜನೆ ಮಾಡೇ ಮಾಡುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲಿಸುತ್ತೇವೆ. ಈ ಹಿಂದೆ 450 ಟಿಎಂಸಿ ನೀರು ಸಮುದ್ರ ಸೇರಿದೆ. ಅದರಲ್ಲಿ 64 ಟಿಎಂಸಿ ನೀರನ್ನು ಹಿಡಿದಿಟ್ಟು ಈ ಭಾಗದ ಜನರ ಬದುಕು ಹಸನ ಮಾಡಲು, ಪ್ರತಿ ಕುಟುಂಬಕ್ಕೆ ಕುಡಿಯಲು ಕಾವೇರಿ ನೀರು ನೀಡಲು ನಾವು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.