ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತವಾದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಉತ್ತಮವಾಗಿದ್ದು,ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲಲು ಸಂಧಾನ ಸೂತ್ರಕ್ಕೆ ಕುಮಾರಸ್ವಾಮಿ ಮೊರೆಹೋಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ವಿಶೇಷವೆಂದರೆ, ರಾಜಕೀಯವಾಗಿ ಮುನಿಸಿಕೊಂಡಿದ್ದ ಬಿಜೆಪಿ ನಾಯಕ ಕೆಸಿ ನಾರಾಯಣಗೌಡ ಹಾಗೂ ಕುಮಾರಸ್ವಾಮಿ ಇದೀಗ ಒಂದಾಗಿದ್ದಾರೆ. ಅಷ್ಟೇ ಏಕೆ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ನಿಮ್ಮಿಂದ, ನಿಮ್ಮ ಗೆಲುವಿಗೆ ಶ್ರಮಿಸುವೆ ಎಂದು ಕುಮಾರಸ್ವಾಮಿಗೆ ಮಾಜಿ ಸಚಿವ ಕೆಸಿ ನಾರಾಯಣಗೌಡ ಭರವಸೆ ನೀಡಿದ್ದಾರೆ.
ಕುಮಾರಸ್ವಾಮಿ ಮತ್ತು ನಾರಾಯಣಗೌಡ ನಡುವೆ ಸಂಧಾನ ಯಶಸ್ವಿಯಾಗಿದೆ. ಜೆಡಿಎಸ್ನ ಸಿಎಸ್ ಪುಟ್ಟರಾಜು, ಅಶ್ವಥ್ ನಾರಾಯಣ್ ಉಭಯ ನಾಯಕರ ನಡುವೆ ಸಂಧಾನ ಮಾಡಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ, ಮಂಡ್ಯದಲ್ಲಿ ಕಾಂಗ್ರೆಸ್ ಓಟಕ್ಕೆ ತಡೆಯೊಡ್ಡಲು ಬಿಜೆಪಿಯ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಇದರ ಮೊದಲ ಭಾಗವಾಗಿಯೇ ಮಾಜಿ ಸಚಿವ ನಾರಾಯಣಗೌಡ ಮನವೊಲಿಕೆ ಮಾಡಲಾಗಿದೆ.
ಎಲ್ಲರೂ ಒಟ್ಟಾಗಿ ನಿಮ್ಮನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿಗೆ ನಾರಾಯಣಗೌಡ ಭರವಸೆ ನೀಡಿದ್ದಾರೆ. ಮಂಡ್ಯದಲ್ಲಿ ಬೃಹತ್ ಜಂಟಿ ಸಮಾವೇಶ ಮಾಡುವ ಮೂಲಕ ಸಮನ್ವಯ ಸಂದೇಶ ನೀಡೋಣ ಎಂದು ಸಲಹೆಯನ್ನೂ ನೀಡಿದ್ದಾರೆ. ಇದೇ ವೇಳೆ, ನನ್ನ ಗೆಲುವಿಗಿಂತ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು.
ಮಂಡ್ಯ ಎನ್ಡಿಎ ಉಸ್ತುವಾರಿಯನ್ನು ಜೆಡಿಎಸ್ ನಾಯಕನ ಜೊತೆ ನೀವು ವಹಿಸಿಕೊಳ್ಳಿ ಎಂದು ಕುಮಾರಸ್ವಾಮಿ ನಾರಾಯಣಗೌಡರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಗೌಡ, ನೀವು ನನಗೆ ಮನವಿ ಮಾಡಬೇಡಿ. ನನ್ನ ರಾಜಕೀಯ ಆರಂಭವಾಗಿದ್ದೇ ನಿಮ್ಮಿಂದ. ನಿಮ್ಮ ಗೆಲುವಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.