ರತ್ಲಾಮ್: ಜಾತಿ ಆಧಾರಿತ ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶಿಸಿದ ಶೇ. 50ರಷ್ಟು ಮಿತಿಯನ್ನು ಕಾಂಗ್ರೆಸ್ ತೆಗೆದುಹಾಕುತ್ತಿದ್ದು, ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಮೀಸಲಾತಿ ಕೋಟಾ ಪ್ರಯೋಜನಗಳನ್ನು ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭರವಸೆ ನೀಡಿದರು.
ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಚುನಾವಣೆಯಲ್ಲಿ ಸಂವಿಧಾನವನ್ನು ಉಳಿಸಲು ಹೋರಾಡಲಾಗುತ್ತಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರು ಘೋಷಿಸಿದ್ದರು. ಅದಕ್ಕಾಗಿಯೇ ಅವರು ‘400 ಸೀಟು’ ಪಡೆಯುವುದಾಗಿ ಘೋಷಣೆ ಮಾಡಿದರು. ಆದರೆ 400 ಅನ್ನು ಮರೆತುಬಿಡಿ ಅವರಿಗೆ 150 ಸೀಟುಗಳು ಸಿಗುವುದೂ ಕಷ್ಟವಿದೆ. ಅವರು ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳುತ್ತಾರೆ. ನಾನು ಈ ಹಂತದಿಂದಲೇ ನಿಮಗೆ ಹೇಳಲು ಬಯಸುತ್ತೇನೆ, ನಾವು ಶೇ. 50ರ ಮಿತಿಯನ್ನು ಮೀರಿ ಮೀಸಲಾತಿಯನ್ನು ಹೆಚ್ಚಿಸುತ್ತೇವೆ. ಬಡವರು, ಹಿಂದುಳಿದವರು, ದಲಿತರು, ಆದಿವಾಸಿಗಳಿಗೆ ಅಗತ್ಯವಿರುವಷ್ಟು ಮೀಸಲಾತಿ ನೀಡುತ್ತೇವೆ’’ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನವನ್ನು ಮುಗಿಸಲು ಬಯಸುತ್ತದೆ. ಇದನ್ನು ಬದಲಾಯಿಸಲು ಬಯಸುತ್ತದೆ. ಆದರೆ, ಕಾಂಗ್ರೆಸ್ ಮತ್ತು ಇಂಡಿಯಾ ಬಣವು ಸಂವಿಧಾನವನ್ನು ಉಳಿಸಲು ಪ್ರಯತ್ನಿಸುತ್ತಿದೆ. ಈ ಸಂವಿಧಾನವು ನಿಮಗೆ ಜಲ (ನೀರು), ಅರಣ್ಯ, ಜಮೀನಿನ ಮೇಲೆ ಹಕ್ಕುಗಳನ್ನು ನೀಡಿದೆ. ನರೇಂದ್ರ ಮೋದಿ ಆ ಹಕ್ಕುಗಳನ್ನು ತೆಗೆದುಹಾಕಲು ಬಯಸಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.