ನಾವೆಲ್ಲ ಕನ್ನಡ ಸಾಲಿಯವರು ಸಾಲಿ ಬೆಳಿಗ್ಗೆ 10-00 ರಿಂದ ಸಂಜೆ 5-00 ಗಂಟೆಯವರೆಗೆ ಇರುತ್ತಿತ್ತು. ಇಡೀ ದಿನ ಶಾಲೆಯಲ್ಲಿ ಒಬ್ಬರೇ ಸರ್ ಪಾಠ ಮಾಡ್ತಿದ್ರು. ಎಲ್ಲಾ ವಿಷಯದಲ್ಲೂ ಅವರೇ ಶ್ರೇಷ್ಟರು. ಒಂದು ಅವಧಿಯಲ್ಲಿ ಕೋಪದಲ್ಲಿದ್ದರೆ, ಮತ್ತೊಂದು ಅವಧಿಯಲ್ಲಿ ನಗುನಗುತ್ತಾ ಇರುತ್ತಿದ್ದರು. ವರ್ಷ ಪೂರ್ತಿ ಒಬ್ಬರೇ ಸಾಲಿಯ ಎಲ್ಲಾ ವಿಷಯಗಳ ಪಾಠ ಕಲಿಸಿದರೂ ಒಂದೆ ಒಂದು ದಿನ ಬೇಜಾರಾಗುತ್ತಿರಲಿಲ್ಲ. ನೆಲದ ಮೇಲೆ ಕುಳಿತು ಕೊಳ್ಳುತ್ತಿದ್ದ ಕಾಲವದು.
ಆವಾಗೆಲ್ಲ ಸಾಲಿಯಲ್ಲಿ ಪ್ರತಿ ಶುಕ್ರವಾರ ಸರಸ್ವತಿ ಪೂಜೆ (ಎಲ್ಲಾ ಗೆಳೆಯರಿಂದ ಹಣ ಸಂಗ್ರಹಿಸಿ ಪೂಜೆ ಮಾಡುತ್ತಿದ್ದೇವು). ವರ್ಷಕ್ಕೆ ಎರಡು ಸಾರಿ ಮಾತ್ರ ತ್ರಿವರ್ಣ ಧ್ವಜ ಹಾರಿಸುತ್ತಿದ್ದೇವು. ಆಗಸ್ಟ್ 15, ಮತ್ತು ಜನವರಿ 26 ರಂದು. ಸ್ವಾತಂತ್ರ್ಯ ದಿನದ ತಯಾರಿಯೂ ಕನಿಷ್ಟ ಒಂದು ವಾರ ನಡೆಯುತ್ತಿತ್ತು. ಮನೆಯಲ್ಲಿ ಸರಿಯಾಗಿ ಊಟ, ಆಟ, ಯಾವುದು ಇರುತ್ತಿರಲಿಲ್ಲ. ಶಾಲೆಯಲ್ಲಿ ಆ ಒಂದು ವಾರ ಪೂರ್ತಿ ತಯಾರಿಯಲ್ಲೆ ಕಾಲ ಕಳೆಯುತ್ತಿದ್ದೇವು. ಮನೆಯಲ್ಲಿ ಅಥವಾ ಶಾಲೆಯಲ್ಲಿ ಯಾರಾದರೂ ಒಂದು ಕೆಲಸ ಹೇಳಿದರೆ ಸರ್ ನಮ್ಮ ಆಗಷ್ಟ್15 ರ ಸ್ವಾತಂತ್ರ್ಯ ದಿನದ ತಯಾರಿ ಐತಿ ಅಂತ ಹೇಳುತ್ತಿದ್ದೇವು. ಒಂದು ಒಂದು ಕೆಲಸವನ್ನು, ಹೋಮವರ್ಕ, ಮನೆಯ ಕೆಲಸ ಯಾವುದನ್ನೂ ಮಾಡುತ್ತಿರಲಿಲ್ಲ.
ಸ್ವಾತಂತ್ರ್ಯದ ದಿನ ಎಲ್ಲರಿಗೂ ಶಿಕ್ಷಕರು ಬಿಳಿ ಬಟ್ಟೆ ಹಾಕೊಂಡು ಬರಲು ಸೂಚಿಸುತ್ತಿದ್ದರು. ಆದರೆ ನಮ್ಮತ್ರ ಬಿಳಿ ಬಣ್ಣದ ಬಟ್ಟೆ ಇರುತ್ತಿರಲಿಲ್ಲ. ಇಂಗ್ಲಿಷ್ ಮಿಡಿಯಮ್ ಮಕ್ಕಳತ್ರ ಹೋಗಿ ಬಿಳಿ ಬಟ್ಟೆಗಳನ್ನು ಕಲೆಕ್ಟ ಮಾಡಿಕೊಳ್ಳುತ್ತಿದ್ದೇವು. ಅದೇನು ಚೆನ್ನಾಗಿ ಇರುತ್ತಿರಲಿಲ್ಲ. ಮನೆಯ ಗಂಟಿನಲ್ಲಿ ಕಟ್ಟಿಟ್ಟಿದ್ದ ಬಿಳಿ ಬಟ್ಟೆಯನ್ನು ತುಂಬಾ ಷರತ್ತುಗಳ ವಿಧಿಸಿದ ನಂತರ ನಮಗೆ ಬಟ್ಟೆ ಕೊಡುತ್ತಿದ್ದರು. ಅದನ್ನು ಅಮ್ಮನತ್ರ ವಾಶ್ ಮಾಡಿಸಿ, ಒಣಗಿದ ಮೇಲೆ ಇಸ್ತ್ರಿ ಮಾಡಿಸಬೇಕಂದ್ರೆ ಒಂದು ಬಿಡಿಗಾಸು ಇರುತ್ತಿರಲಿಲ್ಲ. ಮನೆಯ ಒಲೆಯಲ್ಲಿ ಇರುವ ಬೆಂಕಿಯ ಕೆಂಡಗಳನ್ನು ಒಂದು ಚೆರಗಿ(ಪಾತ್ರೆ)ಯಲ್ಲಿ ಹಾಕಿ ಬಿಸಿಯಾದ ನಂತರ ಬಟ್ಟೆಯನ್ನು ಇಸ್ತ್ರಿ ಮಾಡಿಕೊಳ್ಳುತ್ತಿದ್ದೇವು. ಇಸ್ತ್ರಿಯೂ ಆಗಿರದಿದ್ದರೂ ಅದನ್ನು ಧರಿಸಿ ಖುಷಿ ಪಡುವ ಕಾಲವದು.
ಶಾಲೆಯ ಎಲ್ಲಾ ಮಕ್ಕಳತ್ತಿರ ಸಂಗ್ರಹಿಸಿದ ಹಣದಿಂದ ಸ್ವಾತಂತ್ರ್ಯ ದಿನದ ಹಿಂದಿನ ದಿನ ಎಲ್ಲಾ ಪೂಜಾ ಸಾಮಗ್ರಿಗಳನ್ನು ತಂದು ತಯಾರಿಗೆ ಅಣಿಯಾಗುತ್ತಿದ್ದೇವು. ಆ ಸಮಯದಲ್ಲಿ ರಂಗೋಲಿ ಹಾಕೋದು ಹೆಣ್ಣುಮಕ್ಕಳು ಮಾತ್ರ ಎನ್ನುವ ವಾದ ಇತ್ತು. ನಮ್ದು ಗಂಡು ಮಕ್ಕಳ ಶಾಲೆ ಆವಾಗ ಅನಿವಾರ್ಯವಾಗಿ ನಾವೆ ಸುಣ್ಣ, ರಂಗೋಲಿ ಹಾಕಿ ಸಂಭ್ರಮಿಸುತ್ತಿದ್ದೇವು. ಸುಣ್ಣ ರಂಗೋಲಿ ನೋಡಿದ ಪ್ರತಿ ಶಿಕ್ಷಕರಿಗೆ ನಕ್ಕು ಸಾಕಾಗುತ್ತಿತ್ತು.
ಎರಡು ದಿನಗಳ ಪೂರ್ತಿ ಸ್ವಾತಂತ್ರ್ಯದ ಬಗೆಗಿನ ಶುಭಾಶಯ ತಿಳಿಸಲು ಬಣ್ಣದಿಂದ ಪೇಪರಗಳಲ್ಲಿ ಮಾಡಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇವು. ಅಮ್ಮ ಅಪ್ಪ ಮಾತ್ರ ನಮ್ಮ ಮಕ್ಕಳಾಟ ನೋಡಿ ನಕ್ಕಿದ್ದೆ ನಕ್ಕಿದ್ದು.
ಶಾಲಾ ಕಾರ್ಯಕ್ರಮ ಮುಗಿಸಿಕೊಂಡು ನವನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಶಾಲೆಯಿಂದ ಕರೆದುಕೊಂಡು ಹೋಗುತ್ತಿದ್ದರು. ಉಚಿತ ಬಸ್ಸುವಳಿರುತ್ತಿದ್ದರು. ಬಸ್ಸಿನಲ್ಲಿ ಹೋಗದೇ. ಬಾಡಿಗೆ ರೂಪದಲ್ಲಿ ಸೈಕಲ್ ತಗೊಂಡು, ಅಮ್ಮ ಮಾಡಿರುವ ಊಟವನ್ನು ಕಟ್ಟಿಕೊಂಡು ಕ್ರಿಡಾಂಗಣಕ್ಕೆ ಹೋಗುತ್ತಿದ್ದೇವು. ಆ ಬಾಡಿಗೆ ತಗೊಂಡಿರುವ ಸೈಕಲ್ ಐದು ಕಿ.ಮೀ ದಾರಿಯಲ್ಲಿ 10-12 ಸಾರಿ ಅದರ ಚೈನ್ ಬಿಚ್ಚಿ ಬೀಳುತ್ತಿತ್ತು. ಚೈನ್ ಹಾಕೊಂಡು ಹೋಗುವಷ್ಟರಲ್ಲಿ ಅರ್ಧಕ್ಕರ್ಧ ಕಾರ್ಯಕ್ರಮ ಮುಗಿದಿರುತ್ತಿತ್ತು. ಎಲ್ಲೋ ಒಂದು ಮೂಲೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮ ನೋಡುತ್ತಾ ತಂದಿರುವ ಊಟ ಮುಗಿಸುತ್ತಿದ್ದೇವು. ನಮ್ಮ ಮನಸ್ಸು ಕಾರ್ಯಕ್ರಮದ ಕಡೆಗೆ ಇರದೇ ಸೈಕಲ್ ಕಡೆಗೆ ಹೆಚ್ಚು ಮನಸ್ಸಿರುತ್ತಿತ್ತು. ಯಾರಾದರೂ ಕಳುವು ಮಾಡಬಹುದು ಅಂತ. ಅಲ್ಲಿ ಕೊಟ್ಟಿರುವ ಸ್ವೀಟ್ ತಿಂದು ಎಲ್ಲಾ ಕಡೆ ತಿರುಗಾಡಿ ಮನೆಯ ಕಡೆಗೆ ಪ್ರಯಾಣ ಬೆಳಿಸಬೇಕಾದರೆ ಮದ್ಯಾಹ್ನದ ಸಮಯ ಆಗಿರುತ್ತಿತ್ತು. ಅಷ್ಟೋತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದು ತಾಪ ಹೆಚ್ಚಿಗೆ ಮಾಡುತ್ತಿದ್ದ.
ಸೈಕಲ್ ಬಾಡಿಗೆಯೂ ಆ ಸಮಯದಲ್ಲಿ ಒಂದು ಗಂಟೆಗೆ 3-00 ರೂ. ಇರುತ್ತಿತ್ತು. ಕನಿಷ್ಠ 5 ಗಂಟೆಗಳ ಕಾಲ ಸೈಕಲ್ ನಮ್ಮೊಟ್ಟಿಗೆ ಇರುತ್ತಿತ್ತು. ಆ ಐದು ಗಂಟೆಯ ಬಾಡಿಗೆ 15 ರೂ ಆಗಿರುತ್ತಿತ್ತು.ಆವಾಗ ನಮ್ಮತ್ರ 2 ರೂ ಇದ್ದರೆ ಅದೇ ದೊಡ್ಡದು. ಸೈಕಲ್ ಅಂಗಡಿಯವರಿಗೆ ಗೊತ್ತಾಗದೇ ಅವರ ಅಂಗಡಿಯ ಮುಂದೆ ಸೈಕಲ್ ಹಚ್ಚಿ ಹೋಗುತ್ತಿದ್ದೇವು. ಸಮಯ ಬಹಳ ಆಗೈತಿ ಅಂತ ಅವನು ಗದರಿಸಿದರೆ ಮಾತ್ರ 5-10 ರೂ. ಕೊಟ್ಟು ಅಲ್ಲಿಂದ ಮೊದಲು ಕಾಲು ಕಿತ್ತುತ್ತಿದ್ದೇವು. ದಾರಿಯಲ್ಲಿ ಬರುವಾಗ ಸೈಕಲ್ ಪಂಚರಾಗಿರುತ್ತಿತ್ತು. ( ಇವಾಗಿನಷ್ಟು ರಸ್ತೆಗಳು ಚೆನ್ನಾಗಿ ಇರುತ್ತಿರಲಿಲ್ಲ.) ಅದನ್ನು ನಡೆದುಕೊಂಡು ಬಂದು ತಿದ್ದಿಸಿ ಕೊಡುತ್ತಿದ್ದೇವು ಅಥವಾ ಹಾಗೇನೆ ಅಂಗಡಿಯವರತ್ರ ಕೊಟ್ಟು ಅಲ್ಲಿಂದ ಕಾಲು ಕಿಳುತ್ತಿದ್ದೇವು.
ಯಾರಾದರೂ ಸ್ವಂತ ಸೈಕಲ್ ಇದ್ದವರ ಡಿಮ್ಯಾಂಡ ಮಾತ್ರ ಬಹಳ ಇರುತ್ತಿತ್ತು. 1 ರೂ ಗೆ ಸಿಗುತ್ತಿದ್ದ ತ್ರಿವರ್ಣ ಧ್ವಜ, ಕಿಸೆಗೆ ಹಾಕುವ ಬ್ಯಾಚ್, ಶಾಲು ತೆಗೆದುಕೊಳ್ಳೋದಕ್ಕೂ ಹಣ ಇರುತ್ತಿರಲಿಲ್ಲ. ಅದೇನು ಇರದಿದ್ದರೂ ಸಂಭ್ರಮ ಮಾತ್ರ ಉತ್ತುಂಗದಲ್ಲಿರುತ್ತಿತ್ತು. ಇಡೀ ದಿನ ಮನೆಯವರಿಂದ , ಮರುದಿನ ಶಾಲೆಯ ಶಿಕ್ಷಕರಿಂದ ಬೈಸ್ಕೊಳ್ಳೋದೇ ಒಂದು ತರಹ ಮಜಾ. ಒಂದು ವಾರ ಕಳೆದರೂ ಬಟ್ಟೆಗಳನ್ನು ಇಸ್ಕೊಂಡಿದವರಿಗೆ ವಾಪಸು ಕೊಡೊಕೆ ಆಗುತ್ತಿರಲಿಲ್ಲ. ಆವಾಗಲೂ ಅವರತ್ರನೂ ಬೈಸ್ಕೊಳ್ಳೋದೆ.
ಸೈಕಲ್ ಮೇಲೆ ತಿರುಗಾಡುವಾಗ ಯಾರೇ ಬಂದರೂ ಭಾರತ ಮಾತಾಕಿ ಜೈ, ವಂದೇ ಮಾತರಂ ಘೋಷಣೆಗಳನ್ನು ಗಂಟಲು ಕಟ್ಟುವವರೆಗೂ ಚಿರುತ್ತಿದ್ದೇವು. ಅದಕ್ಕೆ ತಕ್ಕಂತೆ ಪ್ರತಿಕ್ರಯೆಯೂ ಬರುತ್ತಿತ್ತು. ಸೈಕಲ್ ಹೇಳದೆ ತೆಗೆದುಕೊಂಡು ಹೋದಾಗ ಮನೆಯಲ್ಲಿ ಒದೆ ಇರುತ್ತಿತ್ತು.
ನಮಗೆ ಆವಾಗ ಎಷ್ಟು ಸ್ವಾತಂತ್ರ್ಯ ಇರುತ್ತಿತ್ತೇಂದರೆ ಅದನ್ನು ಅಕ್ಷರದಲ್ಲಿ ನಿರೂಪಿಸೋಕೆ ಆಗುವುದೇ ಇಲ್ಲ. ಆವಾಗ ಸೈಕಲ್‌ಗೆ ತ್ರಿವರ್ಣ ಧ್ವಜ ಕಟ್ಟಿ ಅತ್ಯಂತ ಸಂಭ್ರಮದಿಂದ ಊರು ಪೂರ್ತಿ ಸುತ್ತುತ್ತಿದ್ದೇವು. ಸ್ವೀಟ್ ಸಲುವಾಗಿ ಜಗಳ, ಬಟ್ಟೆ ಸಲುವಾಗಿ ಜಗಳ, ಧ್ವಜ ಹಿಡಿದುಕೊಳ್ಳಲು ಜಗಳ ಎಲ್ಲಾ ಕಡೆಗೂ ಜಗಳ ಮಾಡಿ ಚಿಥೂ ಅಂತ ಶಿಕ್ಷಕರತ್ರ ಬೈಸ್ಕೊಳ್ಳೋದೆ ಒಂತ ತರಹ ಖುಷಿ.
ಶಾಲೆಯ ಕಾಂಪಿಟೇಶನನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡು, ಮನೆಯಲ್ಲಿ ತೊರಿಸಿದಾಗ ತಂದೆ ತಾಯಿಯಷ್ಟು ಯಾರೂ ಖುಷಿ ಪಡುತ್ತಿರಲಿಲ್ಲ. ರಂಗೋಲಿ, ಸುಣ್ಣ ಬಣ್ಣ, ಮಾರ್ಕಿಂಗ್, ಭಾಷಣ, ಸಿಹಿ, ಪೂಜೆ ಎಲ್ಲಾ ನಮ್ಮ ಮೂಲಕವೇ ನಡೆಯುತ್ತಿತ್ತು.
ಕನ್ನಡ ಶಾಲೆಗಳೆಂದರೆ ಹಾಗೇನೆ ಮನೆಯಲ್ಲಿ ಸಿಗದಂತಹ ಪ್ರೀತಿ, ಖುಷಿ ಸಿಗುತ್ತಿತ್ತು. ಹೇಗೇಗೆ ದೊಡ್ಡವರಾಗುತ್ತ ಬಂದಂತೆ ಬಾಲ್ಯದಲ್ಲಿನ ನೆಮ್ಮದಿ ಇವಾಗ ಕಾಣೋಕಾಗೊಲ್ಲ. ಇವಾಗಿನ ಮಕ್ಕಳು ಸಹಿತ ನಾವು ಎಂಜಾಯ ಮಾಡಿದಷ್ಟು ಮಾಡೋಕಾಗೊಲ್ಲ.
ಸೈಕಲ್ ಚೆನ್ನಾಗಿ ಹೊಡೆಯದಕ್ಕೆ ಕಲೆತದ್ದು ಇದೇ ಸಮಯದಲ್ಲಿ ಹೆಚ್ಚು. ಬಾಲ್ಯದಲ್ಲಿನ ಆ ಅನುಭವ ಇವತ್ತು ಸ್ಮೃತಿ ಪಟಲದ ಮೇಲೆ ಒಂದು ಕ್ಷಣ ಬಂದೋಯ್ತು. ಇವಾಗಿನ ಶಾಲಾ ಮಕ್ಕಳನ್ನು ನೆನಪಿಸಿಕೊಂಡು ಬೇಜಾರಾಗುತ್ತೆ.
ಆವಾಗೆಲ್ಲ ಹರೆದಿರುವ ಬಟ್ಟೆ ಹಾಕೊಂಡು ಮೇಕಪ್ ಅಂದರೆ ತಲೆಗೆ ಎಣ್ಣೆ ಹಚ್ಚುವುದು, ಧ್ವಜ , ಬ್ಯಾಚ್ ಎಲ್ಲಾ ಯಾರತ್ರನಾದರೂ ಸರಿ ಇಸ್ಕೊಂಡು ಹಾಕೋಳ್ಳೊದು. ವಾಪಸು ಬರುವುದರೊಳಗೆ ಹೊಟ್ಟೆ ಹಸಿದು, ಬಟ್ಟೆ ಹೊಲಸಾಗಿರುತ್ತಿತ್ತು. ಅದೇ ಬಟ್ಟೆ ಹಾಕೊಂಡು ನನ್ನತ್ರನೂ ಬಿಳಿ ಬಟ್ಟೆ ಇದೆಯಂತ ಊರು ತುಂಬಾ ಸುತ್ತಾಡಿ ಎಲ್ಲರಿಗೂ ತೊರಿಸಿ ಸಂಭ್ರಮಿಸುವುದು.
ಬಾಲ್ಯ ಎಷ್ಟು ಚೆಂದ ಅಲ್ವ ??? ಇಲ್ಲಿ ಬರೆದಿರೋದು 10% ಅಷ್ಟೇ ಉಳಿದಿದ್ದೇಲ್ಲವೂ ನಮ್ಮ ಸ್ಮೃತಿಪಟಲದ ಮೇಲೆ ಹಾಯ್ದು ಹೋಗುತ್ತದೆ. ಆ ಕ್ಷಣಗಳನ್ನು ನೆನಪಿಸಿಕೊಂಡರೆ ಮತ್ತೆ ಬರಬೇಕು ಕಳೆದುಕೊಂಡಿರುವ ಬಾಲ್ಯ.
ಒಬ್ಬೊಬ್ಬರದು ಒಂದೊಂದು ಮಜಭೂತ ಕಥೆಗಳಿರುತ್ತವೆ. ಅದೆಲ್ಲವನ್ನು ಅನುಭವಿಸಿ ಕಳೆದುಕೊಂಡಿದ್ದೇವೆ.
ಸ್ವಾತಂತ್ರ್ಯ ದಿನ ಎಂದರೆ ಈ ತರಹ ಅನುಭವಕ್ಕೆ ಸರಿಸಾಟಿ ಯಾವುದು ಆಗೋಕೆ ಅಸಾಧ್ಯ.
ಫೇಸ್ ಬುಕ್ ಪೇಜ್ ಕೃಪೆ