ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ೨ನೇ ಅಲೆ ತಡೆ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮ ತಿಳಿಸಲು ಹಾಗೂ ವಾರದ ಸಂತೆಯನ್ನು ಬೇರೆ ಸ್ಥಳಾಂತರಿಸುವ ಕುರಿತು ಚರ್ಚಿಸಲು ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಏ.೮ ಹಾಗೂ ೯ರಂದು ನಡೆಯಬೇಕಿದ್ದ ಸಭೆ ಮುಂದೂಡಿದ್ದು ವಾರ ಕಳೆದರೂ ಮತ್ತೆ ಸಭೆ ಸೂಚನೆಯೇ ಇಲ್ಲದೆ ಆಡಳಿತದ ನಡೆ ಸಂಶಯಕ್ಕೆ ಕಾರಣವಾಗಿದೆ.
ಕೋವಿಡ್ ಅಲೆ ರಾಜ್ಯದಲ್ಲಿ ತೀವ್ರತೆ ಪಡೆಯುತ್ತಿದ್ದು ಪಟ್ಟಣದಲ್ಲಿ ನಡೆಯುವ ಜಾನುವಾರು ಸಂತೆಗೆ ಪಕ್ಕದ ರಾಜ್ಯದಿಂದ ಪ್ರತಿ ವಾರ ಸಾವಿರಾರು ವ್ಯಾಪಾರಸ್ಥರು ಬರುತ್ತಾರೆ. ಜತೆಗೆ ಭಾನುವಾರದ ಸಂತೆಯೂ ಸಹ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಗಿಜುಗುಡುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಪಪಂ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರು ಏ.೮ ಹಾಗೂ ೯ರಂದು ಸಂತೆ ಸ್ಥಳಾಂತರ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ತಿಳಿವಳಿಕೆ ನೀಡುವ ಹಿನ್ನಲೆಯಲ್ಲಿ ಸ್ಥಳೀಯ ನಾಡಕಚೇರಿಯಲ್ಲಿ ಸಂಜೆ ೪ಕ್ಕೆ ಸಭೆ ಕರೆದಿದ್ದರು.
ಸಭೆಗೆ ಅಧ್ಯಕ್ಷರನ್ನಷ್ಟೆ ಕರೆದಿದ್ದು ಪ್ರತ್ಯೇಕವಾಗಿ ಸದಸ್ಯರಿಗೆ ಸೂಚನೆ ಇಲ್ಲವೆಂದು ಪಪಂ ಸದಸ್ಯರು ಏ.೮ ಹಾಗೂ ೯ರ ಸಭೆಗೆ ಗೈರಾಗುವುದಾಗಿ ಸ್ಥಾಯಿ ಸಮಿತಿ ಸಭೆಯಲ್ಲಿ ಬಹಿರಂಗವಾಗಿ ಹೇಳಿ ಮುಖ್ಯಾಧಿಕಾರಿ ಕಾರ್ಯ ವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಸಭೆ ನಡೆಯುವುದೆಂದು ಭಾವಿಸಲಾಗಿತ್ತು.
ಏ.೮ರ ಸಂಜೆ ೩ಕ್ಕೆ ನಾಡಕಚೇರಿಯಲ್ಲಿ ಸಭೆಯನ್ನು ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಅವರ ಮೌಖಿಕ ಸೂಚನೆ ಮೇರೆಗೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಮತ್ತೆ ತಿಳಿಸಲಾಗುವುದು ಎಂದು ನೋಟೀಸ್ ಅಂಟಿಸಲಾಗಿತ್ತು. ಪಪಂ ಅಧ್ಯಕ್ಷರೂ ಸಹ ಸದಸ್ಯರಿಗೆ ಆಹ್ವಾನ ಇಲ್ಲವೆಂದರೆ ನಾನು ಹೋದರೂ ಉಪಯೋಗವಿಲ್ಲ ಎಂದು ಸಭೆ ಮುಂದೂಡಲು ಸೂಚಿಸಿದ್ದೇನೆ ಎಂದು ಹೇಳಿದ್ದರು.
ಸಭೆ ಮುಂದೂಡಿ ವಾರ ಕಳೆದರೂ ಈವರೆಗೆ ಯಾವುದೇ ಸೂಚನೆ ಕಂಡು ಬರುತ್ತಿಲ್ಲ. ಪ್ರತಿ ಶನಿವಾರ ಹಾಗೂ ಭಾನುವಾರ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಜತೆಗೆ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಸಂತೆ ಮಾರುಕಟ್ಟೆ ಯಥಾ ಸ್ಥಿತಿಗೆ ಬಂದಿದೆ. ಕೋವಿಡ್ ಅಲೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ನಿಯಮ ಪಾಲಿಸಬೇಕಾದ ಪಪಂ ಆಡಳಿತ ವಿಳಂಬ ಧೋರಣೆ ತೋರದೆ ಶೀಘ್ರ ಸಭೆ ಕರೆದು ಸಂತೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಏ.೮ ಹಾಗೂ ೯ರಂದು ನಡೆಯಬೇಕಿದ್ದ ಸಭೆ ಕಾರಣಾಂತರದಿAದ ಮುಂದೂಡಲಾಗಿದೆ. ವಾರದೊಳಗೆ ಸಭೆ ಕರೆಯಲಾಗುವುದು ಎಂದರು.
ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಾವಲಸಾಬ ಬಾಗೇವಾಡಿ ಮಾತನಾಡಿ, ಕಳೆದ ವಾರ ಯುಗಾದಿ ಹಬ್ಬದ ಅಂಗವಾಗಿ ಪೊಲೀಸರು ಹಾಗೂ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ವಿನಂತಿ ಮಾಡಿಕೊಂಡಿದ್ದೆವು. ಹೀಗಾಗಿ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲೇ ಸಂತೆ ನಡೆಯಿತು. ಈ ಭಾನುವಾರ ನಾವೇ ರಸ್ತೆ ಪಕ್ಕದಲ್ಲಿ ಸಂತೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.