ದೆಹಲಿ
ಕರೊನಾ ವೈರಸ್ ನಂತರದ ಕಾಲದಲ್ಲಿ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಆತಂಕವನ್ನು ಸೃಷ್ಟಿ ಮಾಡಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳುನ ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದೀಗ ಭಾರತೀಯ ಮೂಲದ 32 ವರ್ಷದ ಮಹಿಳೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಳನ್ನು ಸರಣ್ಯ ಎಂದು ಗುರುತಿಸಲಾಗಿದೆ. ಈಕೆ ಕೇರಳದ ಪಲಕ್ಕಾಡ್ ಜಿಲ್ಲೆಯ ಶ್ರೀಕೃಷ್ಣಪುರಂ ಮೂಲದವಳು. ಪ್ರಭಾಕರನ್ ಮತ್ತು ಶಾಂತಕುಮಾರಿ ದಂಪತಿಯ ಪುತ್ರಿ.
ಪತಿ ಮೃದಲ್ ಮೋಹನ್ ಜತೆ ಅರಬ್ನ ಶಾರ್ಜಾದಲ್ಲಿ ನೆಲೆಸಿದ್ದಳು. ಗಂಡನ ಜತೆ ಊಟ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಸರಣ್ಯ ಮೃತಪಟ್ಟಿದ್ದಾಳೆ. ತನ್ನ ಕಣ್ಣೆದುರಲ್ಲೇ ಪತ್ನಿ ಕೊನೆಯುಸಿರೆಳೆದಿದ್ದು ಮೋಹನ್ಗೆ ಭಾರೀ ಆಘಾತವಾಗಿದೆ.
ಹೃದಯಾಘಾತವಾದ ತಕ್ಷಣ ಸರಣ್ಯಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಇಹಲೋಕ ತ್ಯಜಿಸಿದಳು. ಮರಣೋತ್ತರ ವರದಿ ಸೇರಿದಂತೆ ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಸೋಮವಾರ ಸರಣ್ಯ ಮೃತದೇಹವನ್ನು ತವರಿಗೆ ತರುವ ಸಾಧ್ಯತೆ ಇದೆ.
ಕಳೆದ ಭಾನುವಾರಷ್ಟೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ಎದ್ದೇಳಲಿಲ್ಲ ಎಂದು ಹೇಳಲಾಗುತ್ತಿದೆ. ಸ್ವಂದನಾ ಸಾವಿನ ಸುದ್ದಿ ಸೋಮವಾರ ತಿಳಿಯಿತು. ಬ್ಯಾಂಕಾಕ್ನಲ್ಲೇ ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಮುಗಿಸಿ ಮಂಗಳವಾರ ತಡರಾತ್ರಿ ಸ್ಪಂದನಾರ ಮೃತದೇಹವನ್ನು ಭಾರತಕ್ಕೆ ಕರೆತರಲಾಯಿತು. ಇದಾದ ಬಳಿಕ ಬುಧವಾರ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.