ಬೀಳಗಿ: ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸ್ವೀಕೃತವಾಗಿದ್ದರೂ ಹಣ ಜಮೆ ಆಗದ್ದರಿಂದ ಲಕ್ಷಾಂತರ ಮಹಿಳೆಯರು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಲೇ ಇದ್ದು, ಜತೆಗೆ ಕೆಲವರಿಗೆ ಪ್ರತಿ ತಿಂಗಳೂ ಹಣ ಜಮೆ ಆಗುತ್ತಿಲ್ಲಎಂಬ ದೂರುಗಳು ಕೇಳಿಬಂದಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2000 ರೂ. ವನ್ನು ನೇರ ಅವರ ಖಾತೆಗೆ ಜಮೆ ಮಾಡುವುದಾಗಿ ಸರಕಾರ ತಿಳಿಸಿತ್ತು. ಇದನ್ನೇ ನಂಬಿದ ಮಹಿಳೆಯರು ಈಗಲೂ ಗೃಹಲಕ್ಷ್ಮಿಗಾಗಿ ಕಚೇರಿ ಮತ್ತು ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದಾರೆ. ಆದರೂ ಹಲವರಿಗೆ ಹಣ ಜಮೆ ಆಗುತ್ತಿಲ್ಲ.ಆ.30 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ.
ರಾಜ್ಯಾದ್ಯಂತ ಒಟ್ಟು 1,33,61,915 ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ 1,18,16,705 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಹೀಗೆ ಆಯ್ಕೆಯಾದವರಲ್ಲಿ ಆಗಸ್ಟ್‌ನಲ್ಲಿ 1,87,713, ಸೆಪ್ಟಂಬರ್‌ನಲ್ಲಿ 2,77,337, ಅಕ್ಟೋಬರ್‌ನಲ್ಲಿ 6,87,078 ಹಾಗೂ ನವಂಬರ್‌ನಲ್ಲಿ 2,70,890 ಅರ್ಜಿದಾರರಿಗೆ ಹಣ ಬಂದಿಲ್ಲ
.ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳಲ್ಲಿಒಂದಾದ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸಿದಾಗ ಬಹುತೇಕ ಮಹಿಳೆಯರು ಖುಷಿಗೊಂಡಿದ್ದು, ಲಗುಬಗೆಯಿಂದ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದಿದ್ದರು. ನಮ್ಮ ಖಾತೆಗೆ ಇಂದು ಹಣ ಜಮೆ ಆಗುತ್ತೆ, ನಾಳೆ ಜಮೆ ಆಗುತ್ತೆ ಎಂಬ ಭರವಸೆಯಲ್ಲೇ ಕಾಲ ಕಳೆದಿದ್ದರು. ಆದರೆ ಯೋಜನೆ ಜಾರಿಯಾಗಿ 5 ತಿಂಗಳುಗಳೇ ಗತಿಸುತ್ತ ಬಂದಿದ್ದರೂ ಲಕ್ಷಾಂತರ ಮಹಿಳೆಯರಿಗೆ ಹಣ ಜಮೆ ಆಗದಿರುವುದು ನಿರಾಶೆ ಮೂಡಿಸಿದೆ.