ಬಾಚಿಗೊಂಡನಹಳ್ಳಿಯ ಹುರುಕಡ್ಲಿ ಶಿವಕುಮಾರರವರು* ಬರೆಯುತ್ತಾರೆ….
ಗಾಯಗೊಂಡಿವೆ ಬಣ್ಣ ಒಬ್ಬ ಕವಿಗೆ ಬಹಳ ಮುಖ್ಯವಾಗಿ ಬೇಕಾಗೋದು ಭಾವತೀವ್ರತೆ. ಅದು ಎಂ.ಡಿ.ಚಿತ್ತರಗಿಯಯವರಲ್ಲಿದೆ. ಹೀಗಾಗಿ ಇವರ ಕಾವ್ಯವನ್ನು ನಾನು ಪ್ರೀತಿಯಿಂದಲೇ ಸ್ವಾಗತಿಸುವೆ.
ಮಾನವೀಯ ಅಂತಃಕರಣ, ಪ್ರಜ್ಞಾವಂತಿಕೆ ಈ ಕೃತಿಯಲ್ಲಿನ ಕಾವ್ಯದ ಮುಖ್ಯ ಗುಣ. ಇದು ಕನ್ನಡ ಕಾವ್ಯದ (ಜಗತ್ತಿನದೂ ಕೂಡಾ)ಪರಂಪರೆಯಲ್ಲಿಯೆ ಇದೆ. ಹೀಗಾಗಿ ಕವಿಯ ಮಾನವೀಯ ಮಿಡಿತಕ್ಕೆ ಕಾವ್ಯ ಮಾಧ್ಯಮ ಸೂಕ್ತವಾಗಿದೆ.
ಮೊದಲ ಕವನದ ʼಅಕ್ಷರದ ಗದ್ದೆ-ಗದ್ದೆಗೂ…ʼ ಮೂರನೆಯ ಕವಿತೆಯ ʼಪಟಾಕಿಯ ಹೆಣದ ರಾಶಿ..ʼ ʼಹಳಸಿದ ಪೌಡರ್ ವಾಸನೆ..ʼ ಮುಂತಾದ ಸಾಲುಗಳು ಕಾವ್ಯದ ಹೊಸ ಪರಿಭಾಷೆಯನ್ನೇ ಪರಿಚಯಿಸಿವೆ. ʼನಾರುವ ಮನಗಳು..ʼ ʼಭಾಸ್ಕರನ ಬೆದರುಗೊಂಬೆ..ʼ ವಿಭಿನ್ನ ಅರ್ಥಗಳನ್ನು ಧ್ವನಿಸಿವೆ. ʼಮುಳ್ಳುʼ, ʼಹೊಗೆʼ, ʼಅವಳುʼ, ʼಅವ್ವನೊಲವಿನ ತಂಗಳೂಟʼ, ʼಗಾಂಧಿʼ, ʼರಂಜಾನ್ ಚಂದಿರʼ, ʼನಗಬೇಕು ಆತʼ, ʼಸುಂದರಿʼ, ಮುಂತಾದ ಕವನಗಳು ಓದುಗರನ್ನು ಹಿಡಿದು ನಿಲ್ಲಿಸುತ್ತವೆ. ʼಬೆಳಗುʼ ಕವಿತೆಯ ʼದಣಿವರಿಯದ ಚೂಪಾದ ಕೊಡಲಿʼ ನಮ್ಮ ಕಾಲದ ಬರ್ಬರತೆಯನ್ನು ಶಕ್ತವಾಗಿಯೇ ಕಟ್ಟಿಕೊಟ್ಟಿದೆ.
ಸಂಕಲನದ ಎಲ್ಲ ಕವನಗಳೂ ಚೆನ್ನಾಗಿವೆ. ಆದರೆ! ಭಾವಸೂಚಕ ಚಿಹ್ನೆಯ ಬಳಕೆ ಸ್ವಲ್ಪ ಹೆಚ್ಚಾಗಿಯೇ ಬಳಕೆಯಾಗಿದೆ ಎನಿಸಿತು. ಭಾವತೀವ್ರತೆಗೆ ಇದು ಬೇಕು ನಿಜ; ಆದರೆ ಕಾವ್ಯ ಸಂವಹನಕ್ಕೆ ಅದೇ ಅಡ್ಡಿಯಾಗಬಾರದು.
ʼಯುಗಾದಿ ಮತ್ತು ನಾವುʼ ಎಂಬ ಕವನವು ಈ ಚಿಹ್ನೆ ಇಲ್ಲದೆಯೆ ಸರಾಗವಾಗಿ ಸಂವಹನಗೊಂಡಿರುವುದನ್ನು ಕಾಣಬಹುದು ಅಲ್ಲವೇ?
ʼಜಾವದ ಬೇವುʼ ರೊಕ್ಕʼ ಈ ಕವಿತೆಗಳು ಕಾವ್ಯವಾಗುತ್ತಲೇ ಬುದ್ಧಿವಾದ ಹೇಳುವ ಚಾಕಚಕ್ಯತೆಯನ್ನು ತೋರಿವೆ. ಹೀಗೆ ʼಗಾಯಗೊಂಡಿವೆ ಬಣ್ಣ!ʼ ಸಂಕಲನ ನನಗೆ ಇಷ್ಟವಾಯಿತು. ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಹೀಗೆ ಅಖಿಲ ಕರ್ನಾಟಕವನ್ನು ತಲುಪಲೆಂದು ಹಾರೈಸುವೆ.
*ಡಾ. ವಸಂತಕುಮಾರ್ ಎಸ್ ಕಡ್ಲಿಮಟ್ಟಿ* ಯವರ ಮುನ್ನುಡಿಯೂ ಅರ್ಥಪೂರ್ಣವಾಗಿದೆ. ಹಾಗೆಯೇ *ಜಗದೀಶ ಹಾದಿಮನಿಯವರ* ಬೆನ್ನುಡಿಯೂ ಧ್ವನಿಪೂರ್ಣವಾಗಿದೆ. ಇರ್ವರಿಗೂ ಶುಭಾಶಯಗಳು.
ʼಮಥನʼ ಎಂಬ ವಿಮರ್ಶಾ ಕೃತಿಯನ್ನೂ ಹೊರತಂದಿರುವ ಚಿತ್ತರಗಿಯವರಿಗೆ ವಿಮರ್ಶಾ ಕ್ಷೇತ್ರದ ಕಡೆಗೂ ಒಲವಿರುವುದು ಮೆಚ್ಚತಕ್ಕ ಸಂಗತಿ. ಉತ್ತರ ಕರ್ನಾಟಕದಲ್ಲಿ ಈ ಕ್ಷೇತ್ರವೂ ಬೆಳೆಯಬೇಕಿದೆ.
ಹೀಗಾಗಿ ಕವಿಯನ್ನು ಅಭಿನಂದಿಸುವೆ. ಇವರ ಸಾಹಿತ್ಯ, ಸಂಸ್ಕೃತಿಯ ಬಗೆಗಿನ ಪ್ರೀತಿಯ ಹಿಂದಿರುವ ಮಾನವೀಯ ಕಾಳಜಿಗೆ ಧನ್ಯವಾದಗಳು.
* * * * *
*ಹುರುಕಡ್ಲಿ ಶಿವಕುಮಾರ*
ಬಾಚಿಗೊಂಡನಹಳ್ಳಿ
ಪುಸ್ತಕಕ್ಕಾಗಿ ಸಂಪರ್ಕಿಸುವ ವಿಳಾಸ ಶ್ರೀ ಎಂ ಡಿ ಚಿತ್ತರಗಿ ಲೇಖಕರು ಹುನಗುಂದ ಮೊಬೈಲ್ ಸಂಖ್ಯೆ9686019177