ಯಾದಗಿರಿ : ವಡಗೇರಾ ಕಂದಳ್ಳಿ ಹೊರಭಾಗದಲ್ಲಿ ಹಿರೇನೂರು ಗ್ರಾಮದ ಹತ್ತಿರ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರೀಜ್ ಕಂ ಬ್ಯಾರೇಜ್ ಗೇಟ್‌ಗಳು ತುಕ್ಕು ಹಿಡಿದಿವೆ. ಹೀಗಾಗಿ ಗೇಟ್‌ಗಳಿಗೆ ರಂಧ್ರ ಬಿದ್ದ ಪರಿಣಾಮ ನೀರು ಸೋರಿಕೆಯಾಗಿ ತೆಲಂಗಾಣದ ಪಾಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕರ್ನಾಟಕದ ರೈತರಿಗೆ ಅನುಕೂಲವಾಗಬೇಕಾದ ಬ್ಯಾರೇಜ್ ನೀರು ಬ್ಯಾರೇಜ್‌ನ ಗೇಟ್‌ಗಳು ತುಕ್ಕು ಹಿಡಿದು ಸೋರಿಕೆಯಿಂದಾಗಿ ಬ್ಯಾರೇಜ್ ಖಾಲಿಯಾಗಿದೆ. ಈ ಮೂಲಕ ತೆಲಂಗಾಣಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಸೋರಿಕೆ ತಡೆದು ನೀರು ಪೋಲಾಗಂತೆ ಎಚ್ಚರಿಕೆ ವಹಿಸಬೇಕಾದ ಆಡಳಿತ ವರ್ಗ ಹಾಗೂ ಸರಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಬ್ರೀಜ್ ಕಂ ಬ್ಯಾರೇಜ್ ನೀರಿನಿಂದ ಎರಡೂ ವಿಧಾನಸಭಾ ಕ್ಷೇತ್ರಗಳ ರೈತರು ಭತ್ತ, ಹತ್ತಿ, ಶೇಂಗಾ ಸೇರಿ ವಿವಿಧ ಬೆಳೆಗಳನ್ನು ಬೆಳೆದುಕೊಂಡು ಲಾಭ ಪಡೆಯುತ್ತಿದ್ದಾರೆ.ಆದರೆ,ನಿರ್ವಹಣೆಯ ಕೊರತೆಯಿಂದ ಈಬ್ರೀಜ್ ಕಂ ಬ್ಯಾರೇಜ್ ಹಾಳಾಗಿದ್ದು, ಇದಕ್ಕೆ ಅಳವಡಿಸಿರುವ ಗೇಟ್‌ಗಳು ತುಕ್ಕು ಹಿಡಿದಿವೆ.
ಬ್ಯಾರೇಜ್ ನಿರ್ವಹಣೆಗೆ ಪ್ರತೀವರ್ಷ ಸರಕಾರ ಅನುದಾನ ನೀಡುತ್ತಿದ್ದು, ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಈ ಬ್ಯಾರೇಜ್ ಇದ್ದರೂ, ನೀರು ಇಲ್ಲದಂತಾಗಿದೆ. ಬ್ಯಾರೇಜ್ ಮೇಲೆಯೇ ಅವಲಂಬನೆಯಾಗಿರುವ ರೈತರು ಬೆಳೆ ಬೆಳೆದುಕೊಳ್ಳಲು ಆಗದೆ ಸಂಕಷ್ಟ ಪಡುವಂತಾಗಿದೆ.
ಹೊಸ ಗೇಟ್ ಅಳವಡಿಕೆಗೆ ಇಲ್ಲಿನ ರೈತರು ಒತ್ತಾಯಿಸುತ್ತಲೇ ಇದ್ದರೂ ಸರಕಾರ ಮಾತ್ರ ಇದಕ್ಕೆ ಕಿವಿಗೊಡುತ್ತಿಲ್ಲ. ಯಾದಗಿರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 2004 ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಬ್ಯಾರೇಜ್ ಉದ್ಘಾಟಿಸಿ, ಈ ಭಾಗದ ಅನ್ನದಾತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಬ್ಯಾರೇಜ್ ತುಕ್ಕು ಹಿಡಿದು ವರ್ಷಗಳೇ ಕಳೆದರೂ, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಮಾಹಿತಿ ಕಂಡು ಬಂದಿದೆ.