ಕಲಬುರಗಿ: ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇದರಲ್ಲಿ ರಾಜ್ಯದವರಲ್ಲದೇ ದಿಲ್ಲಿ ಮಟ್ಟದವರು ಭಾಗಿಯಾಗಿದ್ದಾರೆ. ದಿಲ್ಲಿಯಿಂದ ಓರ್ವ ಕರ್ನಾಟಕಕ್ಕೆ ವಸೂಲಿಗೆ ಬರ್ತಾರೆ. ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರ ಎಟಿಎಮ್ ಆಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರಕಾರದ ವಿರುದ್ಧ ಗಂಭೀರ ಆರೋಪಿಸಿದರು.
ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಅಕೌಂಟ್‌ಗೆ ಕಾಂಗ್ರೆಸ್ ಹಣ ಹಾಕುತ್ತೆ ಅಂತ ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಹೆಣ್ಮಕ್ಕಳು ಮುಗಿಬಿದ್ದಿದ್ದಾರೆ. ಆದರೆ ನಮ್ಮ ಜನ ವೋಟ್ ಹಾಕೋಕೆ ಹೊರಗೆ ಬರದೇ ಇರುವುದು ದುರ್ದೈವ. ವಾಲ್ಮೀಕಿ ನಿಗಮದಲ್ಲಿ ನಾಗೇಂದ್ರ ಒಬ್ಬನೇ ಹಣ ತಿಂದಿಲ್ಲ. ಇದರಲ್ಲಿ ರಾಹುಲ್ ಗಾಂಧಿಯಿಂದ ಹಿಡಿದು ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರು ಹಣ ತಿಂದಿದ್ದಾರೆ’ ಎಂದು ಆರೋಪಿಸಿದರು.
ಯಾಕೆ ಪ್ರಿಯಾಂಕ್ ಖರ್ಗೆಯವರು ಬಾಯಿ ಬಂದ್ ಮಾಡಿಕೊಂಡು ಕುಳಿತಿದ್ದಾರೆ? ಏನು ಧ್ಯಾನಕ್ಕೆ ಸರಿದಿದ್ದಾರ? ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಹಾರಾಟ ನಡೆಸಿದ್ದ ಪ್ರಿಯಾಂಕ್ ಖರ್ಗೆ ಎಲ್ಲಿದಾರೆ?ಬರೀ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು. ಸಿಎಂ ಕೂಡ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೊಟಿ ಹಗರಣ ನಡೆದಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದೇ ಒಂದು ಶಂಕುಸ್ಥಾಪನೆ, ಗುದ್ದಲಿಪೂಜೆ ನಡೆಯುತ್ತಿಲ್ಲ. ಶಾಸಕರೆಲ್ಲರೂ ಸದ್ಯ ನಿರುದ್ಯೋಗಿಗಳಾಗಿದ್ದೇವೆ. ಒಂದು ವರ್ಷದಲ್ಲಿ ನನ್ನದೇ ಕ್ಷೇತ್ರದಲ್ಲಿ ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ ಎಂದರು.