ರಾಯಚೂರು: ‘ರಾಜ್ಯದಲ್ಲಿ ಲಿಂಗಾಯತ ಸಮುದಾಯದ ನಾಯಕರೆಂದೇ ಬಿಂಬಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ್ ಖಂಡ್ರೆ ಅವರಿಂದಲೇ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಪಟ್ಟಣ ಸಮೀಪದ ಬುದ್ದಿನ್ನಿ ಗ್ರಾಮದಲ್ಲಿ ಪಂಚಮಸಾಲಿ ಸಮುದಾಯ ಸೋಮವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಸಮುದಾಯದ ಜನರು ಜಾಗೃತರಾಗುವ ಜತೆಗೆ ಸಂಘಟಿತರಾಗಬೇಕು. ಸಮುದಾಯದ ನಾಯಕರೆನಿಸಿಕೊಂಡವರು ತಮ್ಮ ಬೆಳಗವಣಿಗೆಗೆ, ತಮ್ಮ ಮಕ್ಕಳ, ಸಂಬಂಧಿಕರ ಶ್ರೇಯೋಭಿವೃದ್ದಿಗಾಗಿ ಸಮುದಾಯವನ್ನೇ ಬಲಿ ಕೊಡುತ್ತಿದ್ದಾರೆ ಎಂದರು.
ಜಾತಿ ಗಣತಿಯಲ್ಲೂನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ವೀರಶೈವ ಸಮುದಾಯ ಕಣ್ಮುಚ್ಚಿ ಕುಳಿತಿದೆ’ ಎಂದು ಟೀಕಿಸಿದರು.ದಾವಣಗೆರೆ, ಬಸವಕಲ್ಯಾಣದಲ್ಲಿಸಮಾವೇಶ ನಡೆಸಿ, ತಮಗೆ ಸಚಿವ ಸ್ಥಾನ, ನಿಗಮ ಮಂಡಳಿ ಅದ್ಯಕ್ಷ ಸ್ಥಾನ ನೀಡಲು ಒತ್ತಾಯಿಸಲಾಗಿತ್ತು. ಆದರೆ, ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಸಮುದಾಯದ ಶಾಸಕರು ಗಮನಹರಿಸುತ್ತಿಲ್ಲ ’ ಎಂದು ಹೇಳಿದರು.