ಬಳ್ಳಾರಿ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಕುರಿತು ಸತ್ಯಾಸತ್ಯತೆ ಏನು ಎಂದು ಗೊತ್ತಾಗಬೇಕು, ಅಲ್ಲಿಯವರೆಗೆ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುರುಗೋಡಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಯಡಿಯೂರಪ್ಪ ಈ ವಿಚಾರ ತಿಳಿಸಿದರು.
ನೆಹರು ಓಲೇಕಾರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅವರು ಯಾಕೆ ಹೋಗುತ್ತಾರ,? ಯಾಕೆ ಬರ್ತಾರೋ ಗೊತ್ತಿಲ್ಲ. ಅವರು ಏಕೆ ರಾಜಕೀಯ ಪಕ್ಷಾಂತರ ಮಾಡುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ದಲಿತ, ಹಿಂದುಳಿದ ಎಲ್ಲ ಸಮುದಾಯಗಳ ಬಂಧುಗಳು ಬಿಜೆಪಿ ಪರವಾಗಿದ್ದು, ಈ ಎಲ್ಲಾ ಸಮುದಾಯಗಳ ಬೆಂಬಲದಿಂದ ನಾವು ಅಧಿಕಾರಕ್ಕೆ ಬರುತ್ತೇವೆ. ಅದನ್ನು ಬಿಟ್ಟು ಕೇವಲ ವೀರಶೈವ ಸಮಾಜದಿಂದ ಮಾತ್ರ ಅಧಿಕಾರಕ್ಕೆ ಬರಲ್ಲ ಎಂದು ಯಡಿಯೂರಪ್ಪ ಹೇಳಿದರು.
ವೀರಶೈವ ಸಮಾಜದಲ್ಲಿ ಶೇ.80 ರಷ್ಟು ಭಾಗದ ಜನರು ನಮಗೆ ಬೆಂಬಲ ಕೊಟ್ಟೇ ಕೊಡುತ್ತಾರೆ. ವೀರಶೈವ ಸಮಾಜದ ಮುಖಂಡರು ಪ್ರಭಾವಿಗಳಿದ್ದಾರೆ. ಇವರೆಲ್ಲರೂ ಬೇರೆ ಸಮಾಜದ ಬಂಧುಗಳನ್ನು ಮಾತನಾಡಿಸಿ ಅವರೆಲ್ಲರಿಗೂ ಬಿಜೆಪಿಗೆ ಮತ ಹಾಕುವಂತೆ ನೋಡಿಕೊಳ್ಳಬೇಕೆಂದು ಪ್ರಾರ್ಥನೆ ಮಾಡುತ್ತೇನೆ ಎಂದು ವಿವರಿಸಿದರು.
ಪ್ರಜ್ವಲ್ ಪ್ರಕರಣಕ್ಕೂ ಚುನಾವಣೆಗೂ ಏನೂ ಸಂಬಂಧ ಇಲ್ಲ ಎಂದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಯಾವ ರೀತಿಯ ಪತ್ರ ಬೇಕಾದರೂ ಬರೆಯಲಿ, ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಬಂದ ಮೇಲೆ ವಿಚಾರಣೆಗೆ ಹಾಜರಾಗಲಿದ್ದಾರೆ. ಆ ನಂತರವಷ್ಟೇ ಸತ್ಯಾಸತ್ಯತೆ ತಿಳಿಯುತ್ತೆ ಎಂದು ಸೂಚಿಸಿದರರು.