ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗಗುರು ಗಿರೀಶ್ ಲದ್ವಾ ನೇತೃತ್ವದಲ್ಲಿ ಮಕ್ಕಳಿಗೆ ಯೋಗಾಸನ ಕಾರ್ಯಕ್ರಮದ ಉದ್ಘಾಟನೆ ಜರುಗಿತು.
ಬಾಗಲಕೋಟೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ, ತಕ್ಷಶಿಲಾ ಸಾಮಾಜಿಕ ಮಹಿಳಾ ಅಭಿವೃದ್ಧಿ ಸಂಸ್ಥೆ ಕರಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಾಗೂರ ಇವರ ಸಹಯೋಗದಲ್ಲಿ ಆಯುಷ್ ಸೇವಾಗ್ರಾಮಗಳಾದ ಚಿಕ್ಕಯರನಕೇರಿ ಹಾಗೂ ಹೊನ್ನರಹಳ್ಳಿ ಶಾಲಾ ಮಕ್ಕಳಿಗಾಗಿ ಯೋಗಾಸನ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕಾ ಆಯುಷ್ ವೈದ್ಯಾಧಿಕಾರಿ ಡಾ|| ಚಂದ್ರಕಾಂತ ರಕ್ಕಸಗಿ ಮಾತನಾಡುತ್ತ, ಉತ್ತಮವಾದ ಜೀವನ ಶೈಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇಂದು ಅಗತ್ಯವಾಗಿದೆ. ಅದಕ್ಕಾಗಿ ನಮ್ಮ ದೇಹ ಮತ್ತು ಮನಸ್ಸು ಸದೃಢವಾಗಲು ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಬಹಳ ಮುಖ್ಯ. ಅದಕ್ಕಾಗಿ ದೇಹ ಮತ್ತು ಮನಸ್ಸುಗಳ ಆರೋಗ್ಯಕ್ಕಾಗಿ ನಿತ್ಯವೂ ಯೋಗಾಸನ ಮಾಡಬೇಕು. ಬಾಯಿ ರುಚಿಗೆ ಜೋತುಬಿದ್ದು ಕರಿದ ತಿಂಡಿಗೆ ದಾಸರಾಗದೆ ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಕರೆ ನೀಡಿದರು.
ಇನ್ನೋರ್ವ ವೈದ್ಯಾಧಿಕಾರಿ ಡಾ|| ಎಸ್ ಬಿ ನಿಡಗುಂದಿ ಮಾತನಾಡಿ, ಇಲಾಖೆಯು ಈ ಯೋಜನೆಯಲ್ಲಿ ಆಯುಷ್ ಅರಿವು, ಮನೆ ಮದ್ದು ಪ್ರಾತ್ಯಕ್ಷಿಕೆ, ಗ್ರಾಮ ನೈರ್ಮಲ್ಯ, ಔಷಧ ಸಸ್ಯಗಳ ವಿತರಣೆ, ವೈದ್ಯಕೀಯ ಪರೀಕ್ಷೆ ಹಾಗೂ ಔಷಧ ವಿತರಣೆ, ದಿನಚರ್ಯ ಮತ್ತು ಋತುಚರ್ಯ ಕುರಿತು ಮಾಹಿತಿ, ಆರೋಗ್ಯಕರ ಜೀವನ ಶೈಲಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತು ಉಪಯುಕ್ತ ಮಾಹಿತಿ ನೀಡುವ ಕಾರ್ಯವನ್ನು ಈ ಯೋಜನೆಯಲ್ಲಿ ಮಾಡಲಾಗುತ್ತದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಿಕ್ಷಕರಾದ ಎಂ ಜಿ ಬಡಿಗೇರ, ಎಸ್ ಎಸ್ ಲಾಯದಗುಂದಿ, ಎಸ್ ಎಲ್ ಕಣಗಿ, ಮಹಾಂತೇಶ ವಂದಾಲಿ, ಅಶೋಕ ಬಳ್ಳಾ ಉಪಸ್ಥಿತರಿದ್ದರು.