ಬೆಂಗಳೂರು: ನಗರದ ಹಸಿರು ತಾಣ ಹಾಗೂ ಐತಿಹಾಸಿಕ ಲಾಲ್ಬಾಗ್ನಲ್ಲಿ ಉದ್ದೇಶಿತ ಸುರಂಗ ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಲಾಲ್ಬಾಗ್ ವಾಕರ್ಸ್ ಅಸೋಸಿಯೇಷನ್ ಸದಸ್ಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಸುರಂಗ ರಸ್ತೆ ನಿರ್ಮಾಣದಿಂದ ಲಾಲ್ಬಾಗ್ನ ಪರಿಸರ, ಮರಗಳು ಹಾಗೂ ಕೋಟ್ಯಂತರ ವರ್ಷಗಳಷ್ಟು ಹಳೆಯದಾದ ನೈಸರ್ಗಿಕ ಶಿಲಾ ರಚನೆಗೆ ಹಾನಿಯಾಗಬಹುದು ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಲಾಲ್ಬಾಗ್ನ ಬಂಡೆಗಳಿಗೆ ಅಪ್ಪಿಕೊಂಡು, “ಲಾಲ್ಬಾಗ್ ಉಳಿಸಿ” ಎಂಬ ಸಂದೇಶ ಸಾರಿದರು.
ಲಾಲ್ಬಾಗ್ ವಾಕರ್ಸ್ ಅಸೋಸಿಯೇಷನ್ ಸೇರಿದಂತೆ ಪರಿಸರಾಸಕ್ತರು ಹಾಗೂ ನಾಗರಿಕರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಲಾಲ್ಬಾಗ್ನ ಪರಿಸರ ಮತ್ತು ಪಾರಂಪರಿಕ ಮಹತ್ವವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಪುರಾತನ ಶಿಲೆಗೆ ಅಪಾಯದ ಆತಂಕ
ಲಾಲ್ಬಾಗ್ನಲ್ಲಿರುವ ಶಿಲಾ ರಚನೆ ಅತ್ಯಂತ ಪುರಾತನ ಭೂವೈಜ್ಞಾನಿಕ ಸಂಪತ್ತಾಗಿದೆ. ಸುರಂಗ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದ ತೋಡುವಿಕೆ ಹಾಗೂ ಸ್ಫೋಟಕಗಳ ಬಳಕೆ ನಡೆದರೆ ಈ ಶಿಲಾ ರಚನೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಮರಗಳು, ಸಸ್ಯಸಂಪತ್ತಿನ ಮೇಲೂ ಪರಿಣಾಮ?
ಸುರಂಗ ರಸ್ತೆ ಯೋಜನೆಗಾಗಿ ಲಾಲ್ಬಾಗ್ನ ಹಲವು ಎಕರೆ ಭೂಮಿಯನ್ನು ಬಳಸಿಕೊಳ್ಳುವ ಪ್ರಸ್ತಾವನೆಯಿಂದ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳು ಹಾಗೂ ಅಪರೂಪದ ಸಸ್ಯ ಪ್ರಭೇದಗಳಿಗೆ ಅಪಾಯ ಎದುರಾಗಬಹುದು ಎಂಬುದು ವಾಕರ್ಸ್ಗಳ ವಾದ.
ನಿರ್ಮಾಣ ಕಾಮಗಾರಿಯಿಂದ ಪಕ್ಷಿಗಳು ಹಾಗೂ ಸಣ್ಣ ಪ್ರಾಣಿಗಳ ನೈಸರ್ಗಿಕ ವಾಸಸ್ಥಳಕ್ಕೂ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಪರಿಸರ ಹೋರಾಟಗಾರರು ಹೇಳಿದ್ದಾರೆ.
ಯೋಜನೆ ಕೈಬಿಡಲು ಆಗ್ರಹ
ಲಾಲ್ಬಾಗ್ನ ಪರಿಸರ ಮತ್ತು ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಸುರಂಗ ರಸ್ತೆ ಯೋಜನೆಯನ್ನು ಮರುಪರಿಶೀಲಿಸಬೇಕು. ನಗರದ ಸಂಚಾರ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಲಾಲ್ಬಾಗ್ ಕೇವಲ ಉದ್ಯಾನವಲ್ಲ. ಇದು ಬೆಂಗಳೂರಿನ ಪರಿಸರ ಮತ್ತು ಪರಂಪರೆಯ ಅವಿಭಾಜ್ಯ ಭಾಗ. ಅಭಿವೃದ್ಧಿಯ ಹೆಸರಿನಲ್ಲಿ ಇದರ ಅಸ್ತಿತ್ವಕ್ಕೆ ಧಕ್ಕೆ ತರಬಾರದು” ಎಂಬ ಸಂದೇಶವನ್ನು ಪ್ರತಿಭಟನಾಕಾರರು ಸಾರಿದರು.
ಸುರಂಗ ರಸ್ತೆ ಯೋಜನೆ ವಿರೋಧಿಸಿ ಲಾಲ್ಬಾಗ್ ವಾಕರ್ಸ್ಗಳ ಪ್ರತಿಭಟನೆ ಮುಂದುವರಿದಿದ್ದು, ಯೋಜನೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.







