ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ವ್ಯಾಪ್ತಿಯ 3 ಜಿಲ್ಲೆಗಳಲ್ಲಿ ಅನುಷ್ಠಾನ
ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಬಾಗಲಕೋಟೆ, ವಿಜಯಪುರ ಹಾಗೂ ಬೀದರ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಬರ ನಿರ್ವಹಣೆಗಾಗಿ ಜಲಾನಯನ ಅಭಿವೃದ್ದಿಗಾಗಿ ವಿಶ್ವ ಬ್ಯಾಂಕ್ ಸಹಕಾರದಿಂದ ರಿವಾರ್ಡ ಯೋಜನೆಯಡಿ 23 ಕೋಟಿ ರೂ.ಗಳ ಐದು ವರ್ಷಗಳ ಸಂಶೋಧನಾ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿಯೆಂದು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ.ಮಹೇಶ್ವರಪ್ಪ ತಿಳಿಸಿದ್ದಾರೆ.
ಅತೀ ಕಡಿಮೆ ಮಳೆ ಬೀಳುವ ಮಳೆಯಾಶ್ರಿತ, ಒಣಬೇಸಾಯ ಪ್ರದೇಶಗಳಲ್ಲಿ ಭೂ ಸಂಪನ್ಮೂಲಗಳ ಸರ್ವೆಕ್ಷಣೆ ಮಾಡಿ, ಮಣ್ಣಿನ ರಸ ಸಾರ, ಭೂಮಿಯ ಸಾಮಥ್ರ್ಯ, ಅಂತರ್ಜಲ, ಮಣ್ಣು-ನೀರು ಸವಳಿಕೆ ಸಂರಕ್ಷಣೆ ಸೇರಿದಂತೆ ಒಟ್ಟಾರೆಯಾಗಿ ಭೂಮಿಯ ಸಮಗ್ರ ಗುಣಧರ್ಮವನ್ನು ಅಧ್ಯಯನ ಮಾಡಿ ಅನುಕೂಲಕರ ಬೆಳೆಗಳನ್ನು ಬೆಳೆಯಲು ಈ ಕಾರ್ಯಕ್ರಮ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಹಾಗೂ ಕೃಷಿ ರಸಾಯನಶಾಸ್ತ್ರ ವಿಭಾಗದ ಡಾ.ಪ್ರಸನ್ನ ಸುಗುರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ 80 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಕೈಕೊಳ್ಳುವ ಈ ಪ್ರೋಜೆಕ್ಟನ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುನಗುಂದ ತಾಲೂಕಿನ ಬಹುತೇಕ ಪ್ರದೇಶವು ಮಳೆಯಾಶ್ರಿತವಾಗಿದ್ದು, ಕ್ಷಾರಯುಕ್ತ ಮಣ್ಣು ಹೆಚ್ಚಾಗಿ ಕಂಡುಬಂದಿದ್ದು, ಸೂಕ್ಷ್ಮ ಪೋಷಕಾಂಶಗಳ ಕೊರತೆಯಿದೆ ಎಂದು ಡಾ.ಪ್ರಸನ್ನ ಸುಗುರ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ರಿವಾರ್ಡ ಯೋಜನೆಯಡಿ ಮುರ್ನಾಲ್ಕು ಹಂತಗಳಲ್ಲಿ ಈ ಜಲಾನಯನ ಅಭಿವೃದ್ದಿ ಸಂಶೋಧನಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪ್ರಥಮ ಹಂತದಲ್ಲಿ ಭೂಗರ್ಭಶಾಸ್ತ್ರದ ಅಧ್ಯಯನ ಯಾವ ಶಿಲೆಯಿಂದ ಮಣ್ಣು ಮಾರ್ಪಾಡಾಗಿದೆ, ಮಣ್ಣಿನ ಆಳ, ಮಣ್ಣಿನ ಬಣ್ಣ, ಇಳಿಜಾರು ಪ್ರಮಾಣ, ಮಣ್ಣಿನ ಹಾಗೂ ನೀರಿನ ಸವಕಳಿ ಪ್ರಮಾಣ ಸೇರಿದಂತೆ ಭೂಮಿಯ ಮಣ್ಣಿನ ಸಂಪೂರ್ಣ ಅಧ್ಯಯನ ನಡೆಸಿ ಎರಡನೇ ಹಂತದಲ್ಲಿ ಮಣ್ಣಿನ ಸಂಪೂರ್ಣ ಪ್ರಯೋಗಶಾಲೆ ಅಧ್ಯಯನ ಕೈಕೊಳ್ಳಲಾಗುವುದೆಂದರು. ಮಣ್ಣಿನ ರಸ ಸಾರ, ಲವಣಾಂಶ, ಸಾರಜನಿಕ, ರಂಜಕ, ಪೋಟ್ಯಾಶ, ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಗಂಧಕ ಪೋಷಕಾಂಶಗಳ ಅಧ್ಯಯನ, ಭೂಮಿಯ ಸಾಮಥ್ರ್ಯ ವಿಶ್ಲೇಷಣೆ, ಮಣ್ಣಿನ ಸಂಪೂರ್ಣ ಪ್ರೊಫೈಲ್ ಅಧ್ಯಯನ, ಅಂತರ್ಜಲ ಪ್ರಮಾಣ, ಮಣ್ಣಿನ ಗಾಳಿಯಾಡುವಿಕೆ ಸ್ಥಿತಿಗತಿ ನಡೆಸಲಾಗುವುದು.
ಒಟ್ಟಾರೆ ಹುನಗುಂದ ತಾಲೂಕಿನ ಎಲ್ಲ ಹಿಡುವಳಿದಾರರಿಗೆ ಸಮಗ್ರ ಕೃಷಿ ಪದ್ದತಿ, ಕೃಷಿ ಅರಣ್ಯ, ಬಹುವಾರ್ಷಿಕ ಹಣ್ಣಿನ ಬೆಳೆಗಳು, ಋತುಮಾನ ಬೆಳೆಗಳು, ವಾಣಿಜ್ಯ ಬೆಳೆಗಳು, ಕಾಯಿಪಲ್ಲೆ ಸೇರಿದಂತೆ ಆರ್ಥಿಕ ಹಾಗೂ ಉತ್ತಮ ಇಳುವಳಿಯ ಬೆಳಗಳನ್ನು ಆಯಾ ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಬೆಳೆಯಲು ಸಲಹೆ ನೀಡಲು ಈ ಸಂಶೋಧನಾ ಕಾರ್ಯಕ್ರಮ ಅನುಕೂಲವಾಗಲಿದೆ ಎಂದು ಡಾ.ಪ್ರಸನ್ನ ತಿಳಿಸಿದ್ದಾರೆ.
ಮಣ್ಣಿನ, ನೀರಿನ ಸವಕಳಿ ತಡೆಯುವ ಕ್ರಮಗಳನ್ನು, ವಿವಿಧ ಸಂರಕ್ಷಣಾ ವಿಧಾನಗಳನ್ನು, ಬದು, ಚೆಕ್‍ಡ್ಯಾಮ್, ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು. ಒಟ್ಟಾರೆಯಾಗಿ ಹರಿಯುವ ನೀರು ನಿಲ್ಲುವಂತೆ ನಿಂತ ನೀರು ಇಂಗುವಂತೆ ಸವಕಳಿ ಪ್ರಮಾಣ ಕಡಿಮೆಗೊಳಿಸಲಾಗುವುದು. ಮುರ್ನಾಲ್ಕು ವರ್ಷಗಳಲ್ಲಿ ಈ ವೈಜ್ಞಾನಿಕ ವರದಿ ಪೂರ್ಣಗೊಂಡು ಭೂಮಿಯ ಸಾಮಥ್ರ್ಯ ವಿಶ್ಲೇಷಿಸಿ ಯಾವ ಬೆಳೆಗಳನ್ನು ಬೆಳೆಯಬಹುದೆಂದು ವಿವಿಧ ಇಲಾಖೆಗಳಿಗೆ ಅನುಕೂಲವಾಗುವಂತೆ ಶಿಫಾರಸ್ಸು ಮಾಡಲಾಗುವುದೆಂದರು.