ಲಾಹೋರ್ (ಪಾಕಿಸ್ತಾನ): ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲು 62 ಭಾರತೀಯರು ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದಾರೆ. ಪಾಕಿಸ್ತಾನದ ಲಾಹೋರ್ ಬಳಿ ಮಹಾ ಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು 62 ಭಾರತೀಯರು ಆಗಮಿಸಿದ್ದಾರೆ ಎಂದು ಇಲ್ಲಿನ ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ವಕ್ತಾರ ಆಮೀರ್ ಹಾಶಿಮ್ ತಿಳಿಸಿದ ಮಾಹಿತಿ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಲಾಹೋರ್ ನಗರದಿಂದ 300 ಕಿ. ಮೀ. ದೂರದಲ್ಲಿ ಇರುವ ಚಕ್ವಾಲ್‌ನಲ್ಲಿ ಐತಿಹಾಸಿಕ ಕತಾಸ್ ರಾಜ್ ದೇಗುಲ ಇದೆ. ಈ ದೇಗುಲದಲ್ಲಿ ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ವತಿಯಿಂದ ಮಹಾ ಶಿವರಾತ್ರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮಾರ್ಚ್ 9 ರಂದು ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ. ರಾಜಕೀಯ ಹಾಗೂ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದರು.
ವಿಶ್ವನಾಥ್ ಬಜಾಜ್ ಎಂಬುವರ ಸಾರಥ್ಯದಲ್ಲಿ 62 ಹಿಂದೂ ಭಕ್ತರು ಪಾಕಿಸ್ತಾನಕ್ಕೆ ತೆರಳಿದ್ದು, ಅವರನ್ನು ಸುರಕ್ಷಿತವಾಗಿ ಕಾರ್ಯಕ್ರಮಕ್ಕೆ ಕರೆದೊಯ್ದು ಬಳಿಕ ವಾಪಸ್ ಕಳಿಹಿಸಿಕೊಡುವ ಜವಾಬ್ದಾರಿಯನ್ನು ಕಾರ್ಯಕ್ರಮ ಸಂಘಟಕರು ಹೊತ್ತುಕೊಂಡಿದ್ದಾರೆ.ವಾಘಾ ಗಡಿ ಮೂಲಕ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ 62 ಹಿಂದೂಗಳು, ಲಾಹೋರ್ ತಲುಪಿದ ಬಳಿ, ಅಲ್ಲಿನ ದೇರಾ ಸಾಹಿಬ್ ಗುರುದ್ವಾರದಲ್ಲಿ ಒಂದು ರಾತ್ರಿ ಕಳೆದರು.
ಬಳಿಕ ಅಲ್ಲಿಂದ 300 ಕಿ. ಮೀ. ದೂರದಲ್ಲಿ ಇರುವ ಕತಾಸ್ ರಾಜ್ ದೇಗುಲದತ್ತ ತೆರಳಿದರು. ಈ ದೇಗುಲದಲ್ಲೇ ಮುಖ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪಾಕಿಸ್ತಾನದಲ್ಲಿರುವ ಹಿಂದೂ ಅತಿಥಿಗಳಿಗೆ ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ವತಿಯಿಂದಲೇ ಊಟೋಪಚಾರ, ವಸತಿ ಹಾಗೂ ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ಬೇಳಕಿಗೆ ಬಂದಿದೆ.