ಬೆಂಗಳೂರು: ಟೀಮ್ ಇಂಡಿಯಾದ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೆ ತುತ್ತಾಗಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆ ಅವರ ಈ ಜವಾಬ್ದಾರಿಯನ್ನು ಕನ್ನಡಿಗ ಕೆ.ಎಲ್ ರಾಹುಲ್ಗೆ(KL Rahul) ನೀಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
“ಬಿಸಿಸಿಐ ಕೆ.ಎಲ್ ರಾಹುಲ್ ಅವರನ್ನು ವಿಶ್ವಕಪ್‌ನ ಉಳಿದ ಪಂದ್ಯಗಳಿಗೆ ಭಾರತ ತಂಡದ ಉಪನಾಯಕನನ್ನಾಗಿ ನೇಮಿಸಿದೆ. ತಂಡದೊಂದಿಗೆ ಪ್ರಯಾಣಿಸುತ್ತಿರುವ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಶನಿವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಉಪನಾಯಕನ ಸ್ಥಾನ ಕಳೆದುಕೊಂಡಿದ್ದ ರಾಹುಲ್
ರಾಹುಲ್ ಅವರು ಈ ಹಿಂದೆ ಮೂರು ಮಾದರಿ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಉಪನಾಯಕಾಗಿದ್ದರು. ಆದರೆ ಇದೇ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ಅವರು ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಎಲ್ಲ ಕಡೆಯಿಂದ ಭಾರಿ ಟೀಕೆ ಎದುರಿಸಿದ್ದರು. ಕಳಪೆ ಪ್ರದರ್ಶನ ನೀಡಿದ ಕಾರಣ ಅವರನ್ನು ಉಪನಾಯಕನ ಪಟ್ಟವನ್ನು ಮತ್ತು ತಂಡದಿಂದಲೇ ಕೈ ಬಿಡಲಾಗಿತ್ತು. ಬಳಿಕ ಐಪಿಎಲ್ ವೇಳೆ ಗಾಯಗೊಂಡು ಅವರು ಕ್ರಿಕೆಟ್ನಿಂದ ಕೆಲ ತಿಂಗಳುಗಳ ಕಾಲ ವಿಶ್ರಾಂತಿ ಪಡೆದಿದ್ದರು.
ಆಸೀಸ್ ವಿರುದ್ಧ ಸರಣಿ ಗೆಲುವು
ವಿಶ್ವಕಪ್ ಆರಂಭಕ್ಕೆ ಇನ್ನೇನು 2 ವಾರ ಇರುವಾಗ ಆಸ್ಟ್ರೇಲಿಯಾ ವಿರುದ್ಧ ನಡೆಸಿದ್ದ ಏಕದಿನ ಸರಣಿಯಲ್ಲಿ ಅನುಭವಿ ಆಟಗಾರರ ಅಲಭ್ಯತೆಯಲ್ಲಿಯೂ ರಾಹುಲ್ ಅವರು ತಂಡದ ನಾಯಕತ್ವ ವಹಿಸಿ ಆಸೀಸ್ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿದ್ದರು. ಇದು ಇವರ ನಾಯಕತ್ವದ ಸಾಮರ್ಥ್ಯವನ್ನು ಮತ್ತು ಟೀಕೆ ಮಾಡಿದವರು ಬಾಯಿ ಮುಚ್ಚುವಂತೆ ಮಾಡಿತ್ತು. ಆದರೆ ಈ ಹಿಂದೆಯೇ ಪಾಮಡ್ಯಗೆ ಉಪನಾಯಕನ ಸ್ಥಾನ ನೀಡಿದ ಕಾರಣ ಅವರನ್ನೇ ವಿಶ್ವಕಪ್ನಲ್ಲಿಯೂ ಮುಂದುವರಿಸಲಾಯಿತು. ಇದೀಗ ಮತ್ತೆ ರಾಹುಲ್ಗೆ ಉಪನಾಯಕನ ಪಟ್ಟ ಒದಗಿ ಬಂದಿದೆ.
ಪ್ರಚಂಡ ಫಾರ್ಮ್
ತೊಡೆಯ ಶಸ್ತ್ರಚಿಕಿತ್ಸೆ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದ ಕೆ.ಎಲ್ ರಾಹುಲ್ ವಿಶ್ವಕಪ್ ಕಪ್ನಲ್ಲಿ ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಜತೆಗೆ ಅತ್ಯತ್ತಮ ಕೀಪಿಂಗ್ ಪ್ರದರ್ಶನದ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ 2 ಬಾರಿ ಉತ್ತಮ ಫೀಲ್ಡರ್ ಎಂಬ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ರಾಹುಲ್ ಅವರು ಇದೇ ಫಾರ್ಮ್ ಮುಂದುವರಿಸಿದರೆ ರೋಹಿತ್ ಶರ್ಮ ಬಳಿಕ ನಾಯಕತ್ವ ಸಿಗುವ ಎಲ್ಲ ಲಕ್ಷಣವಿದೆ.
ಮತ್ತೊಬ್ಬ ಕನ್ನಡಿಗ
ಹಾರ್ದಿಕ್ ಪಾಂಡ್ಯ (Hardik Pandya) ಈಗ ವಿಶ್ವಕಪ್‌ನಿಂದಲೇ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಪ್ರಸಿದ್ಧ್ ಕೃಷ್ಣ(prasidh krishna) ತಂಡ ಸೇರಿದ್ದಾರೆ. ಕನ್ನಡಿಗ, ವೇಗಿ ಪ್ರಸಿದ್ಧ್ ಅವರು ತಂಡ ಸೇರಿದ್ದು ಮತ್ತಷ್ಟು ಬಲ ಬಂದಂತಾಗಿದೆ. ಭಾರತದ ಪರ 17 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನು ಆಡಿರುವ ಪ್ರಸಿದ್ಧ್ ಕೃಷ್ಣ, ಒಟ್ಟು 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಕೆ.ಎಲ್.ರಾಹುಲ್ ಜತೆಗೆ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಮತ್ತೊಬ್ಬ ಕನ್ನಡಿಗ ಎಂಬ ಖ್ಯಾತಿಗೆ ಪ್ರಸಿದ್ಧ್ ಕೃಷ್ಣ ಪಾತ್ರರಾಗಿದ್ದಾರೆ.