ಸಮಸ್ತ ಭಾರತೀಯರ ಕನಸು, ಇದೀಗ ನನಸಾಗುತ್ತಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣಗಳನ್ನು ಮನೆ ಮನೆಗೂ ತಲುಪಿಸುವುದು ಒಂದು ಪವಿತ್ರ ಕಾರ್ಯ. ಸಮಸ್ತ ಹಿಂದೂಗಳ ಕನಸು ನನಸಾಗುವ ದಿನ ನಾವೆಲ್ಲ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸೋಣ. ಇದೊಂದು ಪಕ್ಷಾತೀತ, ರಾಷ್ಟ್ರಭಕ್ತಿಯ ಕಾರ್ಯಕ್ರಮ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
–ಮಲ್ಲಿಕಾರ್ಜುನ ಚರಂತಿಮಠ, ಅಧ್ಯಕ್ಷರು, ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್
ಉಚ್ಚಾಟಿತರೊಟ್ಟಿಗೆ ಸಂಸದ ಗದ್ದಿಗೌಡರ
ರಾಜ್ಯ ವಿಧಾನ ಸಭೆ ಚುನಾವಣೆಗೂ ಮುನ್ನವೇ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಮುಖಂಡರು ಹಾಗೂ ಅವರ ಬೆಂಬಲಿಗರೊಂದಿಗೆ ಸಂಸದ ಪಿ.ಸಿ. ಗದ್ದಿಗೌಡರ ಕಾಣಿಸಿಕೊಳ್ಳುವ ಮೂಲಕ ಬಾಗಲಕೋಟೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಸೃಷ್ಠಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ಬಿಜೆಪಿ ಮುಖಂಡರಾಗಿದ್ದ ಮಲ್ಲಿಕಾರ್ಜುನ ಚರಂತಿಮಠ ಹಾಗೂ ಅವರ ಕೆಲ ಬೆಂಬಲಿಗರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಈ ವಿಷಯ ಪಕ್ಷದ ರಾಜ್ಯಾಧ್ಯಕ್ಷರವರೆಗೂ ಹೋದರೂ ಉಚ್ಷಾಟನೆ ವಾಪಸ್ಸಾತಿ ಆಗಿರಲಿಲ್ಲ.
ಯಾವಾಗ ಉಚ್ಚಾಟನೆ ವಾಪಸ್ಸಾತಿ ಪ್ರಕ್ರಿಯೆ ನಡೆಯಲಿಲ್ಲವೊ ಆಗ ಮಲ್ಲಿಕಾರ್ಜುನ ಚರಂತಿಮಠ ಅವರು ತಮ್ಮ ಬೆಂಬಲಿಗರೊಂದಿಗೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿದ್ದ ಸಹೋದರ ವೀರಣ್ಣ ಚರಂತಿಮಠ ಅವರ ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿದರು.
ಪಕ್ಷದೊಳಗಿನ ಆಂತರಿಕ ಭಿನ್ನಮತ ತಾರಕಕ್ಕೇರಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ. ಮೇಟಿ ನಿರೀಕ್ಷಿತ ಮಟ್ಟಕ್ಕಿಂತ ಅಧಿಕ ಮತಗಳೊಂದಿಗೆ ಗೆಲುವು ಸಾಧಿಸಿದರು ಎನ್ನುವುದು ಬಹಿರಂಗ ಗುಟ್ಟು.
ಚುನಾವಣೆ ಫಲಿತಾಂಶದ ಬಳಿಕವೂ ಬಾಗಲಕೋಟೆ ಬಿಜೆಪಿ ಪಾಳೆಯದಲ್ಲಿ ಅದರಲ್ಲೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತು ಮಲ್ಲಿಕಾರ್ಜುನ ಚರಂತಿಮಠರ ನಡುವಿನ ಸಹೋದರರ ಸವಾಲ್ ಹಾಗೆ ಮುಂದುವರಿದಿದೆ. ಜತೆಗೆ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮತ್ತು ವೀರಣ್ಣ ಚರಂತಿಮಠ ಅವರ ನಡುವಿನ ಭಿನ್ನಮತ ತಾರಕಕ್ಕೇರಿದೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ, ಒಬ್ಬರನ್ನೊಬ್ಬರು ಮಾತನಾಡಿಸದ ಸ್ಥಿತಿ ಇದೆ.
ಏತನ್ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ನೇಮಕಗೊಂಡಿದ್ದು, ನೇಮಕದ ಬಳಿಕ ಕಳೆದ ತಿಂಗಳು ಬಾಗಲಕೋಟೆಗೂ ಅವರು ಭೇಟಿ ನೀಡಿದ್ದರು. ಈ ವೇಳೆ ಪಕ್ಷದ ಮುಖಂಡರ ನಡುವಿನ ಭಿನ್ನಮತ ಶಮನಗೊಳಿಸುವ ಕೆಲಸ ನಡೆಯಲಿದೆ ಎನ್ನುವ ಪಕ್ಷದ ಕಾರ್ಯಕರ್ತರ ಆಶಯ ಈಡೇರಲೇ ಇಲ್ಲ.
ವಿಜಯೇಂದ್ರ ಅವರು ಪಕ್ಷದ ಮುಖಂಡರ ಮನೆ ಹಾಗೂ ಕಚೇರಿಗಳಿಗೆ ಪ್ರತ್ಯೇಕವಾಗಿಯೇ ಭೇಟಿ ನೀಡಿ ಹೋಗಿದ್ದರು. ಆಗ ಅವರೊಂದಿಗೆ ಸಂಸದ ಗದ್ದಿಗೌಡರ ಸಾಥ್ ನೀಡಿ, ವೀರಣ್ಣ ಚರಂತಿಮಠ ಅವರ ಮನೆಗೆ ಮತ್ತು ಪಿ.ಎಚ್. ಪೂಜಾರ ಅವರ ಗೃಹ ಕಚೇರಿಗೆ ತೆರಳಿದ್ದರು.
ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯ ಜೋರಾಗಿ ನಡೆದಿದೆ. ಭಾನುವಾರ ಬಾಗಲಕೋಟೆ ನವನಗರದಲ್ಲಿ ನಡೆದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಗದ್ದಿಗೌಡರ ಹಾಗೂ ಬಿಜೆಪಿ ಉಚ್ಚಾಟಿತ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹಾಗೂ ಅವರ ಬೆಂಬಲಿಗರೊಟ್ಟಿಗೆ ಮನೆ ಮನೆಗೆ ತೆರಳಿ ಮಂತ್ರಾಕ್ಣತೆ ಹಾಗೂ ಆಮಂತ್ರಣ ಪತ್ರಿಕೆ ವಿತರಿಸಿದ್ದು ಬಿಜೆಪಿ ಪಾಳೆಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ದೂರವಾಗಿರುವವರನ್ನು ಒಗ್ಗೂಡಿಸುವ ಕೆಲಸಕ್ಕೆ ಗದ್ದಿಗೌಡರ ಮುಂದಾದರಾ ಎನ್ನುವ ಚರ್ಚೆ ಶುರುವಾಗಿದೆ.
ಕಳೆದ ತಿಂಗಳು ವಿಜಯೇಂದ್ರ ಅವರು ಆಗಮಿಸಿದ್ದ ವೇಳೆಯೇ ಮುಖಂಡರನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಗದ್ದಿಗೌಡರಿಗೆ ವಹಿಸಿ ಹೋಗಿದ್ದರೋ ಹೇಗೆ ಎನ್ನುವ ಕುತೂಹಲ ಆರಂಭಗೊಂಡಿದೆ. ಮುಂಬರುವ
ಲೋಕಸಭೆ ಚುನಾವಣೆಯಲ್ಲಿ ಇನ್ನೊಂದು ಬಾರಿ ಅದೃಷ್ಟ ಪರೀಕ್ಷೆಗೆ ಗದ್ದಿಗೌಡರ ಸಜ್ಜಾಗಿರುವ ಹಿನ್ನೆಲೆಯಲ್ಲಿ ತಾವೇ ಸ್ವಯಂ ಆಗಿ ಪಕ್ಣದಿಂದ ದೂರವಾಗಿರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಪುನಃ ಪಕ್ಷಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ಧಾರೆ ಎನ್ನುವುದು ಸದ್ಯ ಯಕ್ಷಪ್ರಶ್ನೆಯಾಗಿದೆ.
ಸಂಸದ ಗದ್ದಿಗೌಡರ ಈ ಕಾರ್ಯಕ್ಕೆ ಯಾರೆಲ್ಲ ಬೆಂಬಲ ನೀಡಲಿದ್ದಾರೆ. ಪಕ್ಷದ ಸಂಘಟನೆ ಹಾಗೂ ಒಗ್ಗಟ್ಟಿಗಾಗಿ ಸಾಥ್ ನೀಡಲಿದ್ದಾರೆ ಎನ್ನುವುದು ಗಮನಾರ್ಹ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಈಗಾಗಲೇ ಹೇಳಿಕೆ ನೀಡಿ, ಪಕ್ಷದಲ್ಲಿರುವ ವ್ಯತ್ಯಾಸಗಳನ್ನು ಸರಿಪಡಿಸಲಾಗುವುದು. ಪಕ್ಷದಿಂದ ದೂರವಾಗಿರುವವರನ್ನು ಮತ್ತು ಪಕ್ಷಕ್ಕೆ ಬರುವವರನ್ನು ಮುಕ್ತ ಮನಸ್ಸಿನಿಂದ ಸೇರಿಸಿಕೊಳ್ಳಲಾಗುವುದು. ಆ ಮೂಲಕ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದ್ದಾರು. ರಾಜ್ಯಾಧ್ಯಕ್ಷ ವಿಜಯೇಂದ್ರ, ಉಪಾಧ್ಯಕ್ಷ ನಿರಾಣಿ ಹೇಳಿಕೆಗಳಿಗೆ ಪೂರಕವಾಗಿ ಗದ್ದಿಗೌಡರ ಕೆಲಸ ಆರಂಭಿಸಿರಬಹುದು ಎನ್ನಲಾಗುತ್ತಿದೆ. ಪರಿಣಾಮ ಕಾಯ್ದು ನೋಡಬೇಕಷ್ಟೆ.