ಹೃದ್ರೋಗವೆಂಬುದು ಸಾಮಾನ್ಯವಾಗಿಬಿಟ್ಟಿದ್ದು, ಇದರಿಂದಲೇ ಸಣ್ಣಪುಟ್ಟ ಎದೆನೋವು ಬಂದರೂ ಜನರು ಆತಂಕದಿಂದ ಹೃದ್ರೋಗತಜ್ಞರನ್ನು ಭೇಟಿಯಾಗುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಹೃದ್ರೋಗತಜ್ಞರನ್ನು ಭೇಟಿಯಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜಾಗತಿಕವಾಗಿ ಪ್ರತಿ ವರ್ಷ ಅತಿ ಹೆಚ್ಚು ಸಾವುಗಳಿಗೆ ಹೃದ್ರೋಗ ಮುಖ್ಯ ಕಾರಣವಾಗಿದ್ದು, ಪ್ರಮುಖ ರೋಗಲಕ್ಷಣಗಳನ್ನು ಹೊಂದಿರುವ ಈ ಆರೋಗ್ಯ ಸಮಸ್ಯೆ ಮಾರಣಾಂತಿಕವಾಗಿರುತ್ತದೆ. ಹಾಗಾದರೆ, ಹೃದ್ರೋಗ ಬಾರದಂತೆ ತಡೆಯಲು ನಾವು ಏನು ಮಾಡಬೇಕು?ನಮ್ಮ ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳ ಮೇಲೆ ಹೃದ್ರೋಗವನ್ನು ತಡೆಗಟ್ಟುವುದು ಕೇಂದ್ರೀಕೃತವಾಗಿರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಹೀಗೆ ಹಲವಾರು ರೋಗಗಳಿಗೆ ನಮ್ಮ ಜೀವನಶೈಲಿಯೇ ಮುಖ್ಯ ಕಾರಣವಾಗಿರುತ್ತದೆ.
ಕುಟುಂಬದ ಇತಿಹಾಸ (ಹೆರಿಡಿಟಿ)ದಿಂದ ಧೂಮಪಾನದವರೆಗೆ, ಜೀವನಶೈಲಿಯಿಂದ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳ ಅತಿಯಾದ ಸೇವನೆಯವರೆಗೆ ಹಲವು ಅಂಶಗಳು ಇದಕ್ಕೆ ಕಾರಣವಾಗುತ್ತಿದ್ದು, ಹೃದ್ರೋಗತಜ್ಞರ ಪ್ರಕಾರ, ಕೇವಲ ಒಂದು ಸರಳವಾದ ಆಹಾರದ ಬದಲಾವಣೆಯಿಂದ ನಿಮ್ಮ ಆರೋಗ್ಯದಲ್ಲಿ ಬಹಳ ವ್ಯತ್ಯಾಸಗಳನ್ನು ನೋಡಬಹುದು.
ಸಂಶೋಧನೆಯ ಪ್ರಕಾರ, ತಿನ್ನುವ ಆಹಾರದ ಪ್ರಕಾರಗಳನ್ನು ಬದಲಾಯಿಸುವುದು ಮಾತ್ರವಲ್ಲದೆ ಊಟದ ಸಮಯವನ್ನು ಗಮನದಲ್ಲಿಟ್ಟುಕೊಳ್ಳುವುದು ನಮ್ಮ ಆರೋಗ್ಯದಲ್ಲಿ ಬಹಳ ಬದಲಾವಣೆಯನ್ನು ಉಂಟುಮಾಡುತ್ತಿದ್ದು, ಹೃದ್ರೋಗ ತಜ್ಞರ ಪ್ರಕಾರ, ದಿನವೂ ಬೇಗ ಊಟ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ತಗ್ಗಿಸಬಹುದು. ಹೃದಯರಕ್ತನಾಳದ ಸಮಸ್ಯೆಗಳ ತಡೆಗಟ್ಟುವಿಕೆಯಲ್ಲಿ ಆಹಾರವು ಮಹತ್ವದ ಪಾತ್ರವನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ.