ಈಗೆಲ್ಲಾ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಜನರು ತಮ್ಮ ಮನೆಯ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಮನೆ ಕೆಲಸ ಮಾಡುವ ಮಹಿಳೆಯರ ಮೇಲೆ ತುಂಬಾನೇ ಅವಲಂಬಿತರಾಗಿರುತ್ತಾರೆ. ಅದರಲ್ಲೂ ಗಂಡ ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದರಂತೂ ಮುಗಿದೇ ಹೋಯಿತು, ಕೆಲಸದಾಕೆ ಎಷ್ಟೋತ್ತಿಗೆ ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಾರೆ ಅಂತ ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತಾರೆ. ಮನೆ ಕೆಲಸದಾಕೆ ಒಂದು ದಿನ ಕೆಲಸಕ್ಕೆ ಬರುತ್ತಿಲ್ಲ ಅಂತ ಗೊತ್ತಾದರೆ ಸಾಕು, ಮನೆಯ ಮಹಿಳೆಗೆ (Woman) ಆ ದಿನದ ಕೆಲಸ ಹೇಗಪ್ಪಾ ಮಾಡುವುದು ಎಂಬ ಚಿಂತೆ ರಾತ್ರಿಯಿಂದಲೇ ಕಾಡಲು ಶುರುವಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಈಗ ನಗರ ಪ್ರದೇಶದ ಜನರಿಗೆ ಕೆಟ್ಟ ದಿನ ಎಂದರೆ ಅದು ಅವರ ಮನೆಯ ಕೆಲಸದಾಕೆ ಗೈರು ಹಾಜರಿರುವ ದಿನ ಅಂತ ಹೇಳಬಹುದು.
ಮನೆ ಕೆಲಸದಾಕೆ ಕೆಲಸಕ್ಕೆ ಬೇಗ ಬರಲಿ ಅಂತ ಸೈಕಲ್ ಕೊಡಿಸಿದ ವ್ಯಕ್ತಿ
ಆದರೆ ಮನೆ ಕೆಲಸದವರು ಎಷ್ಟು ದೂರದಿಂದ ಕೆಲಸ ಮಾಡಲು ಬರುತ್ತಾರೆ ಅನ್ನೋದರ ಬಗ್ಗೆ ಅನೇಕರು ಅಸಡ್ಡೆ ತೋರಿ, ಬೇಗ ಬರಲು ಹೇಳುತ್ತಿರುತ್ತಾರೆ. ಇತ್ತೀಚೆಗೆ, ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಬರುವ ಕೆಲಸದಾಕೆಗೆ ಸೈಕಲ್ ಖರೀದಿಸಲು ಸಹಾಯ ಮಾಡಿದ್ದಾರೆ ನೋಡಿ.
ಆ ವ್ಯಕ್ತಿ ತನ್ನ ಮನೆಗೆ ಕೆಲಸ ಮಾಡಲು ಬರುವ ಮಹಿಳೆಗೆ ಮಾಡಿದ ಸಹಾಯದ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ವೀಡಿಯೋ ಪೋಸ್ಟ್
ಈ ವೈರಲ್ ವೀಡಿಯೋದಲ್ಲಿ, ಮನೆಯ ಸಹಾಯಕಿ ಪಾರ್ಕಿಂಗ್ ಪ್ರದೇಶದಲ್ಲಿ ಪಿಂಕ್ ಸೈಕಲ್ ಮೇಲೆ ಕುಳಿತು ತುಳಿದುಕೊಂಡು ಹೋಗುವುದನ್ನು ಕಾಣಬಹುದು.
ಈ ಪೋಸ್ಟ್ ಅನ್ನು ನರೇಶ್ ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಮನೆಯ ಸಹಾಯಕಿಯ ಪರಿಸ್ಥಿತಿಯನ್ನು ವಿವರಿಸುವ ದೀರ್ಘ ಟಿಪ್ಪಣಿಯನ್ನು ಬಳಕೆದಾರರು ಬರೆದಿದ್ದಾರೆ.
“ನಮ್ಮ ಮನೆಗೆ ಬರುವ ಅಡುಗೆಯವಳು ನೀರಜಾ, ಕೆಲಸ ಮಾಡಲು 25 ನಿಮಿಷಗಳ ಕಾಲ ನಡೆದುಕೊಂಡು ಬರುತ್ತಿದ್ದಳು. ಇಷ್ಟೇ ಅಲ್ಲದೆ ಅವಳು ಇನ್ನೂ 2 ಮನೆಗಳಲ್ಲಿ ಕೆಲಸ ಮಾಡುತ್ತಾಳೆ.
ಅವಳು ಪ್ರತಿದಿನ ಸುಮಾರು 1.5 ರಿಂದ 2 ಗಂಟೆಗಳ ಕಾಲ ನಡಿಗೆಯಲ್ಲಿಯೇ ಸಮಯ ಕಳೆಯುತ್ತಾಳೆ. ಸಂತಾನಾ ಸೆಲ್ವನ್ ಅವರಿಂದ ಸ್ಫೂರ್ತಿ ಪಡೆದ ನಾನು ಅವಳಿಗೆ ಸೈಕಲ್ ಖರೀದಿಸಲು ಪ್ರೋತ್ಸಾಹಿಸಿದೆ.
ಆಗ ಆಕೆ ನೆರೆಹೊರೆಯವರೆಲ್ಲರೂ ನೋಡಿ ನಗುತ್ತಾರೆ ಮತ್ತು ಅವಳನ್ನು ಕೀಟಲೆ ಮಾಡುತ್ತಾರೆ ಅಂತ ಹೇಳಿದಳು. ಕೆಲವು ತಿಂಗಳ ಆಲೋಚನೆಯ ನಂತರ ಅವಳು ಸೈಕಲ್ ಖರೀದಿಸಲು ಒಪ್ಪಿಕೊಂಡಳು. ನಾನು ಅರ್ಧ ಹಣವನ್ನು ನೀಡಿದೆ, ಅವಳು ಇನ್ನರ್ಧ ಹಣವನ್ನು ಸೇರಿಸಿಕೊಂಡು ಗುಲಾಬಿ ಬಣ್ಣದ ಸೈಕಲ್ ಖರೀದಿಸಿದಳು” ಎಂದು ಬರೆದಿದ್ದಾರೆ.
ಈ ಪೋಸ್ಟ್ ನೋಡಿ ವ್ಯಕ್ತಿಯ ಒಳ್ಳೆಯತನವನ್ನು ಮೆಚ್ಚಿಕೊಂಡ್ರು ನೆಟ್ಟಿಗರು
ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿತ್ತು, ಅಂದಿನಿಂದ ಇದು ನೆಟ್ಟಿಗರಿಂದ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಗಳಿಸಿದೆ. ಜನರು ನೀರಜಾ ಅವರಿಗೆ ಸಹಾಯ ಮಾಡಿದ ನರೇಶ್ ಅವರ ಒಳ್ಳೆಯತನವನ್ನು ತುಂಬಾನೇ ಇಷ್ಟಪಟ್ಟರು.
“ಇದು ತುಂಬಾ ಅದ್ಭುತವಾಗಿದೆ! ನೀರಜಾ ಈಗ ಟ್ರೆಂಡ್‌ಸೆಟರ್” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದರು. ಇನ್ನೊಬ್ಬ ಬಳಕೆದಾರರು “ದಯವಿಟ್ಟು ಅವಳಿಗೆ ಬೈಸಿಕಲ್ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡಿ. ನೀವು ಅವಳ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತೀರಿ ಎಂದು ತೋರುತ್ತಿದೆ” ಎಂದು ಕಾಮೆಂಟ್ ಮಾಡಿದ್ದಾರೆ.