ಬೆಂಗಳೂರು
ಜಿಲ್ಲೆಯ ಮುಧೋಳ ತಾಲೂಕು ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಇದುವರೆಗಿನ ಪ್ರಯತ್ನಗಳು ಫಲ ನೀಡದ ಕಾರಣ ಟೆಂಡರ್ ನಲ್ಲಿ ಕೆಲ ಷರತ್ತು ಮತ್ತು ನಿಬಂಧನೆಗಳನ್ನು ಮಾರ್ಪಾಡು ಮಾಡಿ ಮತ್ತೆ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಟೆಂಡರ್ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಇಎಂಡಿ ಮೊತ್ತವನ್ನು ಎರಡು ಕೋಟಿ ರೂ.ಗಳಿಂದ ಒಂದು ಕೋಟಿ ರೂ.ಗೆ ಕಡಿತ ಮಾಡಲಾಗಿದೆ. ಭದ್ರತಾ ಠೇವಣಿಯನ್ನು ಐದು ಕೋಟಿ ರೂ. ಹಾಗೂ ಮುಂಗಡ ಹಣವನ್ನು 30 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ.
2024-25ನೇ ಹಂಗಾಮಿನಿಂದಲೇ ಕಬ್ಬು ಅರೆಯುವ ಕಾರ್ಯ ಆರಂಭಿಸಬೇಕಿದ್ದು, ಗುತ್ತಿಗೆ ಅವಧಿಯನ್ನು 30 ವರ್ಷನಿಗದಿಪಡಿಸಲಾಗಿದೆ.
ಬಿಡ್ಡು ಸಲ್ಲಿಸುವ ಕಂಪನಿಯ ಧನಾತ್ಮಕ ನಿವ್ವಳ ಮೌಲ್ಯ ೧೨೫ ಕೋಟಿ ರೂ. ಇರಬೇಕು ಎಂದು ತೀರ್ಮಾನಿಸಲಾಗಿದೆ. ಈ ಮೊದಲು ಈ ನಿವ್ವಳ ಮೌಲ್ಯ ೨೨೫ ಕೋಟಿ ರೂ. ಇರಬೇಕು ಎಂದಿತ್ತು.
ಬಿಡ್ ದಾರರ ವಾರ್ಷಿಕ ವಹಿವಾಟು 500 ಕೋಟಿ ರೂ. ಇರಬೇಕು. ಹಾಗೂ ಕನಿಷ್ಟ ಹತ್ತು ವರ್ಷ ಸಕ್ಕರೆ ಕಾರ್ಖಾನೆ ಅಥವಾ ಡಿಸ್ಟಿಲರಿ ಇಲ್ಲವೇ ಸಹ ವಿದ್ಯುತ್ ಘಟಕ ನಡೆಸಿದ ಅನುಭವ ಹೊಂದಿರಬೇಕು. ಸಕ್ಕರೆ ಕಾರ್ಖಾನೆಯನ್ನು ಸಮರ್ಥವಾಗಿ ನಡೆಸುವ ಅಗತ್ಯ ಹಣಕಾಸಿನ ಭದ್ರತೆ ನೀಡಬೇಕು.
ಕಬ್ಬು ಅರೆಯುವ ಸಾಮರ್ಥ್ಯವನ್ನು ಐದು ಸಾವಿರ ಟಿಸಿಡಿಗಳಿಂದ ಕನಿಷ್ಟ ಹತ್ತು ಸಾವಿರ ಟಿಸಿಡಿಗೆ ವಿಸ್ತರಣೆ ಮಾಡಿ ಸೂಕ್ತವಾದ ಸಹ ವಿದ್ಯುತ್ ಘಟಕ, ಕನಿಷ್ಟ 80 ಕೆಎಲ್ ಪಿಡಿ ಡಿಸ್ಟಿಲರಿ ಅಥವಾ ಎಥೆನಾಲ್ ಘಟಕವನ್ನು ಏಳು ವರ್ಷಗಳೊಳಗೆ ಸ್ಥಾಪನೆ ಮಾಡಬೇಕು ಎಂಬ ಷರತ್ತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಆಧುನೀಕರಣ ಮತ್ತು ವಿಸ್ತರಣಾ ಕಾರ್ಯ ಕೈಗೊಳ್ಳುವಾಗ ಹೊಸ ಸ್ಥಾವರ ಮತ್ತು ಯಂತ್ರೋಪಕರಣ ಅಳವಡಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಕಡ್ಡಾಯ ಎಂಬ ಷರತ್ತನ್ನು ಮುಂದುವರಿಸಲಾಗಿದೆ.
ಈ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು 2020ರ ಅಕ್ಟೋಬರ್ 20ರಂದು ನಡೆದ ಸಚಿವ ಸಂಪುಟ ಸಭೆ ಅನುಮತಿ ನೀಡಿತ್ತು.
2021ರಲ್ಲಿ ಕರೆದಿದ್ದ ಟೆಂಡರ್ ವೇಳೆ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುತ್ತಿಗೆ ಮೊತ್ತ ಪಾವತಿಸದ ಕಾರಣ ಟೆಂಡರ್ ರದ್ದುಪಡಿಸಲಾಗಿತ್ತು.
2024ರಲ್ಲಿ ಮರು ಟೆಂಡರ್ ಕರೆದಿದ್ದ ಸಮಯದಲ್ಲಿ ಪ್ರಿಬಿಡ್ ಸಭೆಗಳಲ್ಲಿ ಹಾಜರಿದ್ದ ಗುತ್ತಿಗೆದಾರರು ಟೆಂಡರ್ ನ ಕೆಲವು ಷರತ್ತು ಮತ್ತು ನಿಬಂಧನೆಗಳನ್ನು ಮಾರ್ಪಾಡು ಮಾಡಬೇಕು ಎಂದು ಮನವಿ ಮಾಡಿದ್ದರು. ಎರಡು ಬಾರಿ ಕರೆದಿದ್ದ ಟೆಂಡರ್ ಗಳಲ್ಲಿ ಗುತ್ತಿಗೆದಾರರು ಭಾಗವಹಿಸದ ಕಾರಣ ಈ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಸರ್ಕಾರದ ಪ್ರಯತ್ನಗಳು ಫಲ ನೀಡಿರಲಿಲ್ಲ.
ಹೀಗಾಗಿ 2024ರ ಜೂನ್ 12ರಂದು ನಡೆದ ಸಭೆಯಲ್ಲಿ ಕೆಲವು ಷರತ್ತು ಮತ್ತು ನಿಬಂಧನೆಗಳಿಗೆ ತಿದ್ದುಪಡಿ ತಂದು ಸಚಿವ ಸಂಪುಟ ಸಭೆಯ ಮುಂದೆ ತರಲಾಗಿತ್ತು ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಷರತ್ತುಗಳೇನು?
• 2024-25ನೇ ಹಂಗಾಮಿನಿಂದಲೇ ಕಾರ್ಖಾನೆ ಆರಂಭಿಸಬೇಕು
• ಗುತ್ತಿಗೆ ಅವಧಿ 30 ವರ್ಷಗಳಿಗೆ ನಿಗದಿ
• ಏಳು ವರ್ಷಗಳೊಳಗೆ ಎಥೆನಾಲ್ ಅಥವಾ ಡಿಸ್ಟಿಲರಿ ಘಟಕ ಸ್ಥಾಪನೆ
• .ಹೊಸ ಸ್ಥಾವರ ಅಳವಡಿಕೆಗೆ ಅತ್ಯಾಧುನಿಕ ತಂತ್ರಜ್ಞಾನ
——