ನಟಿ ಸಮಂತಾ ರುತ್ ಪ್ರಭು ಅವರು ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದು, ಮಯೋಸೈಟಿಸ್ ಕಾಯಿಲೆಯಿಂದ ಅವರಿಗೆ ತುಂಬ ತೊಂದರೆ ಆಯಿತು. ಅದಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ಅವರು ವಿದೇಶಕ್ಕೆ ತೆರಳಿದ್ದರು. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದು, ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸಿನಿಮಾ ಮಾತ್ರವಲ್ಲದೇ ಬೇರೆ ಬೇರೆ ಚಟುವಟಿಕೆಗಳಲ್ಲಿ ಸಮಂತಾ ತೊಡಗಿಕೊಂಡಿದ್ದು, ಅವರ ಪಾಡ್ಕಾಸ್ಟ್ ‘ಟೇಕ್ 20’ ಕಾರ್ಯಕ್ರಮ ಫೇಮಸ್ ಆಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ಸಮಂತಾ ಅವರು ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂಬ ಆರೋಪ ಎದುರಾಗಿದ್ದು, ಸಮಂತಾ ರುತ್ ಪ್ರಭು ಅವರು ಆರೋಗ್ಯದ ಬಗ್ಗೆ ಏನಾದರೂ ಹೇಳುತ್ತಾರೆ ಎಂದರೆ ಅಭಿಮಾನಿಗಳು ಗಮನವಿಟ್ಟು ಕೇಳುತ್ತಾರೆ.
ಅದೇ ಕಾರಣಕ್ಕೋ ಏನೋ ‘ಟೇಕ್ 20’ ಎಪಿಸೋಡ್ನಲ್ಲಿ ಲಿವರ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ ಈ ಸಂಚಿಕೆಯಲ್ಲಿ ಸಮಂತಾ ಹಾಗೂ ಅವರ ಜೊತೆ ಇರುವ ಅತಿಥಿ ಹಂಚಿಕೊಂಡ ಮಾಹಿತಿ ಸಂಪೂರ್ಣ ತಪ್ಪಾಗಿದೆ ಎಂದು ವೈದ್ಯರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಕರಾರು ತೆಗೆದಿದ್ದು, ಲಿವರ್ ಡಿಟಾಕ್ಸ್’ ಕುರಿತು ಈ ಸಂಚಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಈ ಮಾಹಿತಿಯು ಜನರ ದಾರಿ ತಪ್ಪಿಸುತ್ತಿದೆ ಎಂದು ವೈದ್ಯರೊಬ್ಬರು ತಕರಾರು ತೆಗೆದಿದ್ದಾರೆ.
‘ಇವರು ಫೇಮಸ್ ನಟಿ ಸಮಂತಾ. ತಮ್ಮ 33 ಮಿಲಿಯನ್ ಫಾಲೋವರ್ಸ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿಜ್ಞಾನದ ಕುರಿತು ಅನಕ್ಷರಸ್ತರಾಗಿರುವ ಇಬ್ಬರು ವ್ಯಕ್ತಿಗಳು ತಮ್ಮ ಅಜ್ಞಾನವನ್ನು ಹರಡುತ್ತಿದ್ದಾರೆ. ಸಮಂತಾ ಜೊತೆ ಇರುವ ಈ ತರಬೇತುದಾರ ನಿಜವಾಗಿ ವೈದ್ಯಕೀಯ ಕ್ಷೇತ್ರದ ವ್ಯಕ್ತಿ ಅಲ್ಲ. ಲಿವರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದೂ ಈತನಿಗೆ ಗೊತ್ತಿಲ್ಲ’ ಎಂದು ವೈದ್ಯರು ಛಾಟಿ ಬೀಸಿದ್ದು ಬೆಳಕಿಗೆ ಬಂದಿದೆ.