*ಗೃಹ ಸಚಿವ ಜಿ.ಪರಮೇಶ್ವರ್ ಜೊತೆಯಲ್ಲಿ ಪೂರ್ವಭಾವಿ ಸಭೆ
*ತುಮಕೂರಿನಲ್ಲಿ ನವೆಂಬರ್ 24ಕ್ಕೆ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ
ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನವೆಂಬರ್ 24ರಂದು ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹ ಸಚಿವರೂ ಆದ ಜಿ.ಪರಮೇಶ್ವರ ಅವರನ್ನು ತುಮಕೂರಿನಲ್ಲಿ ಭೇಟಿ ಮಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ ನೇತೃತ್ವದ ನಿಯೋಗ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ.
ಕ್ರೀಡಾಕೂಟವನ್ನು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸಿದ್ದು, ಎಲ್ಲಾ ಜಿಲ್ಲೆಗಳಿಂದ ಸಾವಿರ ಪತ್ರಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಭಾರತ ತಂಡದ ಮಾಜಿ ನಾಯಕ ರಾಹುಲ್ ಡ್ರಾವಿಡ್ ಮತ್ತು ಅನಿಲ್‌ಕುಂಬ್ಳೆ ಅವರನ್ನು ಉದ್ಘಾಟನೆಯ ವಿಶೇಷ ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಲಾಯಿತು.
ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಆಚರಣೆ ಮಾಡಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ ಸಚಿವರು, ಈ ಬಗ್ಗೆ ಜಿಲ್ಲಾಡಳಿತದ ಸಹಕಾರವನ್ನೂ ನೀಡುವುದಾಗಿ ತಿಳಿಸಿದರು.
ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ ಅವರು ಪತ್ರಕರ್ತರಿಗೆ ಸಂಬಂಧಿಸಿದ ರಾಜ್ಯ ಮಟ್ಟದ ಎರಡು ಕಾರ್ಯಕ್ರಮಗಳು ನಮ್ಮ ಜಿಲ್ಲೆ ಆತಿಥ್ಯ ವಹಿಸುತ್ತಿರುವುದು ಸಂತಸದ ಸಂಗತಿ. ಹಿಂದೆ 2 ರಾಷ್ಟ್ರೀಯ ಸಮ್ಮೇಳನಗಳು ಅತ್ಯಂತ ವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ನಡೆದಿವೆ. ಎಲ್ಲರೂ ಸೇರಿ ರಾಜ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸೋಣ. ಸಿಎಂ ಅವರನ್ನು ಆಹ್ವಾನಿಸೋಣ ಎಂದರು.
ತುಮಕೂರಿನ ಎಂ.ಜಿ. ಕ್ರೀಡಾಂಗಣವನ್ನು ಮಾದರಿಯಾಗಿ ನಿರ್ಮಿಸಲಾಗಿದೆ. ಇದನ್ನು ರಾಜ್ಯ, ರಾಷ್ಟದ ವಿವಿಧೆಡೆಯವರು ಬಂದು ವೀಕ್ಷಿಸಲು ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಪೂರಕವಾಗಲಿದೆ ಎಂದು ಭಾವಿಸುತ್ತೇನೆ. ನಿಮ್ಮೊಂದಿಗೆ ನಾವಿರುತ್ತೇವೆ ವ್ಯವಸ್ಥಿತವಾಗಿ ಸಂಘಟಿಸಿ ಎಂದು ಸಲಹೆ ನೀಡಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಹಿಂದೆ 2012ರಲ್ಲಿ ರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಘಟಕದವರು ಉತ್ಸುಕತೆಯಿಂದ ರಾಜ್ಯಸಮ್ಮೇಳನ ಹಾಗೂ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಸಂಘಟಿಸಲು ಮುಂದಾಗಿದ್ದಾರೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದು ಸಚಿವರನ್ನು ಕೋರಿದರು.
ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ ತುಮಕೂರಿನಲ್ಲಿ ಸುಸಜ್ಜಿತವಾಗಿ ನಿರ್ಮಾಣವಾದ ಮಹಾತ್ಮಗಾಂಧಿ ಕ್ರೀಡಾಂಗಣ ರಾಜ್ಯದವರೆಲ್ಲರಿಗೂ ಪರಿಚಯವಾಗಬೇಕೆಂಬ ನಿಟ್ಟಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ಸ್ಟೇಡಿಯಂನಲ್ಲೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ತುಮಕೂರಿನ ಹೊರಭಾಗದಲ್ಲಿ ಕಾರ್ಯಕ್ರಮ ಮಾಡುವುದಕ್ಕಿಂತ ನಗರದೊಳಗೆ ಕಾರ್ಯಕ್ರಮ ಮಾಡುವುದು ಸೂಕ್ತ ಎಂದು ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ.ಎನ್.ಮಧುಕರ್ ಮತ್ತು ಅನು ಶಾಂತರಾಜ್ ಸಲಹೆ ನೀಡಿದಾಗ ಸಚಿವರು ಅದನ್ನು ಒಪ್ಪಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಸಂಘದ ರಾಜ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ, ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಪರಮೇಶ್, ಜಯಣ್ಣ ಜಯನುಡಿ, ಶಂಕರ್‌ಶಿರಾ, ಯಶಸ್ ಪದ್ಮನಾಭ್, ಕಾಗ್ಗೆರೆ ಸುರೇಶ್, ಕುಣಿಗಲ್ ರವೀಂದ್ರಕುಮಾರ್ ಮತ್ತಿತರರು ನಿಯೋಗದಲ್ಲಿದ್ದರು