This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local NewsPolitics NewsState News

ಬೇಬಿ ಚೌವಾಣ ಅಧ್ಯಕ್ಷೆ, ಉಮಾಶ್ರೀ ಹಣಗಿ ಉಪಾಧ್ಯಕ್ಷೆ

ಬೇಬಿ ಚೌವಾಣ ಅಧ್ಯಕ್ಷೆ, ಉಮಾಶ್ರೀ ಹಣಗಿ ಉಪಾಧ್ಯಕ್ಷೆ

ಎಂಎಲ್‌ಎ, ಎಂಪಿ ಭಾಗಿ|ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಅಮೀನಗಡ

ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಬೇಬಿ ಚೌವಾಣ ಹಾಗೂ ಉಪಾಧ್ಯಕ್ಷೆಯಾಗಿ ಉಮಾಶ್ರೀ ಹಣಗಿ ಆಯ್ಕೆಯಾಗಿದ್ದಾರೆ.

16 ಸದಸ್ಯ ಬಲದ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಎಸ್‌ಸಿ ವರ್ಗಕ್ಕೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಿತ್ತು. ಅಧ್ಯಕ್ಷ ಸ್ಥಾನಕ್ಕೆ ರಮೇಶ ಮುರಾಳ ಮತ್ತು ಬೇಬಿ ಚೌವಾಣ, ಉಪಾಧ್ಯಕ್ಷ ಸ್ಥಾನಕ್ಕೆ ಫಾತಿಮಾ ಅತ್ತಾರ, ಉಮಾಶ್ರೀ ಹಣಗಿ, ಶ್ರೀದೇವಿ ನಿಡಗುಂದಿ ನಾಮಪತ್ರ ಸಲ್ಲಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಶಾಸಕ ಎಚ್.ವೈ.ಮೇಟಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬೆಳಗ್ಗೆ 11ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೇಬಿ ಚೌವಾಣ 10 ಮತ ಹಾಗೂ ರಮೇಶ ಮುರಾಳ 8 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಉಮಾಶ್ರೀ ಹಣಗಿ 10 ಮತ, ಫಾತಿಮಾ ಅತ್ತಾರ 8 ಮತ ಹಾಗೂ ಶ್ರೀದೇವಿ ನಿಡಗುಂದಿ ಯಾವುದೇ ಮತ ಪಡೆದಿರಲಿಲ್ಲ. ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಬೇಬಿ ಚೌವಾಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮಾಶ್ರೀ ಹಣಗಿ ತಲಾ 10 ಮತ ಪಡೆದು ಆಯ್ಕೆ ಆಗಿದ್ದಾರೆ ಎಂದು ಚುನಾವಣಾಕಾರಿ, ಹುನಗುಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಘೋಷಿಸಿದರು. ಚುನಾವಣೆ ಶಿರಸ್ತೇದಾರ ಎಚ್.ಎಂ.ಶಿವಣಗಿ, ವಿಷಯ ನಿರ್ವಾಹಕ ಸಿ.ಜಿ.ಗೌಡರ, ಮುಖ್ಯಾಧಿಕಾರಿ ಸುರೇಶ ಪಾಟೀಲ ಇದ್ದರು.

ನಾಮಪತ್ರ ಹರಿಯಲು ಯತ್ನ?
ನಾಮಪತ್ರ ಸಲ್ಲಿಕೆ ನಂತರ ದಾಖಲೆ ಜೋಡಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸದಸ್ಯರೊಬ್ಬರು ಪ್ರತಿಸ್ಪರ್ಧಿ ಅಭ್ಯರ್ಥಿಯ ನಾಮಪತ್ರ ಕಿತ್ತುಕೊಳ್ಳಲು ಯತ್ನಿಸಿದರು. ಆದರೆ ಸಿಬ್ಬಂದಿಯ ಜಾಗರೂಕತೆಯಿಂದ ಅಂತಹ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ನಾಮಪತ್ರ ಸಲ್ಲಿಕೆ ವೇಳೆ ಎಲ್ಲ ದಾಖಲೆ ಪರಿಶೀಲಿಸಿ ನಾಮಪತ್ರ ಸ್ವೀಕಾರವಾಗಿತ್ತು. ಇಂತಹ ಘಟನೆ ನಡೆಯುವುದೆಂದು ಊಹೆ ಮಾಡಿರಲಿಲ್ಲ ಎಂದು ಚುನಾವಣಾಧಿಕಾರಿ ನಿಂಗಪ್ಪ ಬಿರಾದಾರ ತಿಳಿಸಿದರು.

—-

ಸಂಸದರಿಂದ ಸನ್ಮಾನ
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆ ಆದ ಬೇಬಿ ಚೌವಾಣ ಹಾಗೂ ಉಪಾಧ್ಯಕ್ಷೆ ಉಮಾಶ್ರೀ ಹಣಗಿ ಅವರನ್ನು ಸಂಸದ ಪಿ.ಸಿ.ಗದ್ದಿಗೌಡರ ಸನ್ಮಾನಿಸಿ ಶುಭ ಕೋರಿದರು.

—-
ವಿಜಯೋತ್ಸವ
ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆ ಘೋಷಣೆ ಆಗುತ್ತಲೇ ಪಟ್ಟಣದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ಶಿವಾನಂದ ಟವಳಿ, ಸಂಗಪ್ಪ ಗಾಣಿಗೇರ, ಕಲ್ಲಪ್ಪ ಭಗವತಿ, ರಾಹುಲ್ ಸಜ್ಜನ, ರಾಮಣ್ಣ ಬ್ಯಾಕೋಡ, ಯಮನೂರ ಕತ್ತಿ, ಮಲ್ಲೇಶ ನಿಡಗುಂದಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

—-

ಬಿಗಿ ಪೊಲೀಸ್ ಬಂದೋಬಸ್ತ್
ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಪಟ್ಟಣ ಪಂಚಾಯಿತಿ ಕಚೇರಿ ಎದುರು ಬ್ಯಾರಿಕೇಡ್ ಹಾಕಿ ಪೊಲೀಸರು ಕಾವಲು ಕಾಯುವಂತಾಗಿತ್ತು. ಹುನಗುಂದ ಉಪವಿಭಾಗದ ಅಮೀನಗಡ, ಹುನಗುಂದ, ಇಳಕಲ್ ಹಾಗೂ ಗುಳೇದಗುಡ್ಡ ಪೊಲೀಸ್ ಠಾಣೆಯ ಎಸ್‌ಐ, ಡಿಎಆರ್ ಹಾಗೂ ಸಿಬ್ಬಂದಿ ಸೇರಿ ಒಟ್ಟು 60 ಕ್ಕೂ ಹೆಚ್ಚು ಸಿಬ್ಬಂದಿ ಪಟ್ಟಣದಲ್ಲಿ ಪಹರೆ ನಡೆಸಿದರು. ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ್ ಸವದಿ, ನವನಗರ ಸಿಪಿಐ ಬಿರಾದಾರ ಭೇಟಿ ನೀಡಿ ಪರಿಸ್ಥಿತಿಯ ಮಾಹಿತಿ ಪಡೆದರು.
—-

ಕಳೆದೆರಡು ವರ್ಷದಿಂದ ಸದಸ್ಯರಾಗಿದ್ದರೂ ಅಕಾರದಿಂದ ವಂಚಿತರಾಗಿದ್ದೆವು. ಇದೀಗ ಅಕಾರದ ಭಾಗ್ಯ ಲಭಿಸಿದ್ದು ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ.
ಬೇಬಿ ಚೌವಾಣ, ನೂತನ ಅಧ್ಯಕ್ಷೆ, ಅಮೀನಗಡ ಪಪಂ.

ಅಮೀನಗಡ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯೆ ಬೇಬಿ ಚೌವಾಣ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಉಮಾಶ್ರೀ ಹಣಗಿ ಸಂಸದರೊಂದಿಗೆ ಸಂಭ್ರಮಿಸಿದರು.

Nimma Suddi
";