ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದು, ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆಯದೆ ಅಕ್ರಮವಾಗಿ ದತ್ತು ಪಡೆದಿದ್ದೇ ಅವರ ಬಂಧನಕ್ಕೆ ಕಾರಣ. ಅಷ್ಟೇ ಅಲ್ಲ, ಹಲವು ನಿಯಮಗಳನ್ನು ಸೋನು ಶ್ರೀನಿವಾಸ ಗೌಡ ಗಾಳಿಗೆ ತೂರಿದ್ದಾರೆ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು ಎಂದು ಮಾಹಿತಿ ತಿಳಿದು ಬಂದಿದೆ.
ಈ ದೂರನ್ನು ಆಧರಿಸಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದ್ದು, ಮಗು ದತ್ತು ಪಡೆಯಲು ಹಲವು ಪ್ರಕ್ರಿಯೆಗಳು ಇವೆ. ಆ ಪ್ರಕ್ರಿಯೆನ್ನು ಸೋನು ಶ್ರೀನಿವಾಸ್ ಗೌಡ ಪಾಲಿಸಿಲ್ಲ. ಸೋನು ಶ್ರೀನಿವಾಸ ಗೌಡ ಮಗುವನ್ನು ಪಡೆದಿರೋದು ಕಾನೂನು ಬಾಹೀರ ಆಗಿದ್ದು, ಮಗುವಿನ ಪಾಲಕರಿಗೆ ಹಲವು ಸೌಲಭ್ಯ ನೀಡಿದ್ದಾಗಿ ಸೋನು ಶ್ರೀನಿವಾಸ ಗೌಡ ಹೇಳಿಕೊಂಡಿದ್ದರು. ಹೀಗಾಗಿ, ಇದು ಮಗುವಿನ ಮಾರಾಟದಂತೆ ಕಂಡು ಬಂದಿದೆ ಎಂದು ದೂರುದಾರರು ಹೇಳಿದರು.
ಮಗುವಿಗೂ ಹಾಗೂ ಮಗುವನ್ನು ದತ್ತು ಪಡೆಯುವ ವ್ಯಕ್ತಿಗೂ ಕನಿಷ್ಠ 25 ವರ್ಷಗಳ ಅಂತರ ಇರಬೇಕು. ಆದರೆ, ಆ ನಿಯಮ ಇಲ್ಲಿ ಪಾಲನೆ ಆಗಿಲ್ಲ. ಮಗುವಿಗೆ ಕಿರುಕುಳ ನೀಡಿದ ಆರೋಪವೂ ಸೋನು ವಿರುದ್ಧ ಕೇಳಿ ಬಂದಿದ್ದು, ಮಗುವಿನ ಐಡೆಂಟಿಟಿ, ಅವರ ಹೆಸರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ. ಈ ಕೆಲಸವನ್ನು ಸೋನು ಶ್ರೀನಿವಾಸ ಗೌಡ ಮಾಡಿದ್ದಾರೆ. ಇದೆಲ್ಲವೂ ಅವರಿಗೆ ಮುಳುವಾಗುವ ಸೂಚನೆ ಇದೆ.
ಸೋನು ಶ್ರೀನಿವಾಸ ಗೌಡ ಅವರು ಈ ಮೊದಲು ಮಗುವಿನ ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ ಎಂದು ಹೇಳಿದ್ದರು. ಆದರೆ, ಅವರು ಇದನ್ನು ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಮೊದಲು ಕೂಡ ಹಲವು ವಿವಾದಗಳನ್ನು ಸೋನು ಮಾಡಿಕೊಂಡಿದ್ದರು ಎಂದು ಮಾಹಿತಿ ಕಂಡು ಬಂದಿದೆ.