ನ್ಯೂಯಾರ್ಕ್,: ಎಕ್ಸ್ ಎಂದು ರೀಬ್ರ್ಯಾಂಡ್ ಆಗಿ ಒಂದು ವರ್ಷದ ಬಳಿಕ ಈಗ ಟ್ವಿಟ್ಟರ್ ಪೂರ್ಣವಾಗಿ ಎಕ್ಸ್ ಆಗಿ ಬದಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಟ್ವಿಟ್ಟರ್ ಡೊಮೈನ್ ಅನ್ನು ಪೂರ್ಣವಾಗಿ ಎಕ್ಸ್ ಡೊಮೈನ್ಗೆ ಬದಲಾಯಿಸಲಾಗಿದ್ದು, ಬ್ರೌಸರ್ನಲ್ಲಿ ಟ್ವಿಟ್ಟರ್ ಡಾಟ್ ಕಾಮ್ ಎಂದು ಕೊಟ್ಟರೆ ಅದು ಎಕ್ಸ್ ಡಾಟ್ ಕಾಮ್ಗೆ ಹೋಗುತ್ತದೆ. ಸದ್ಯದಲ್ಲೇ ಎಲ್ಲರ ಬ್ರೌಸರ್ಗಳಿಂದ ಟ್ವಿಟ್ಟರ್ ಮಾಯವಾಗಿ ಎಕ್ಸ್ ಪ್ರತ್ಯಕ್ಷವಾಗಲಿದೆ.
ಕಳೆದ ವರ್ಷ ಟ್ವಿಟ್ಟರ್ ಅನ್ನು ಎಕ್ಸ್ ಆಗಿ ರೀಬ್ರ್ಯಾಂಡಿಂಗ್ ಮಾಡಲಾಗಿತ್ತು. ಅದರ ಹಕ್ಕಿಯ ಲೋಗೋವನ್ನೂ ಎಕ್ಸ್ ಆಗಿ ಬದಲಾಯಿಸಲಾಗಿತ್ತು. ಟ್ವೀಟ್ ಎಂಬುದನ್ನು ಎಕ್ಸ್ ಪೋಸ್ಟ್ ಎಂದು ಬದಲಿಸಲಾಗಿದ್ದು, ಯುಆರ್ಎಲ್ ಮಾತ್ರ ಟ್ವಿಟ್ಟರ್ ಎಂದೇ ಇತ್ತು. ಮಾಧ್ಯಮಗಳಲ್ಲಿ ವರದಿ ಬರೆಯುವಾಗ ಟ್ವಿಟ್ಟರ್ ಮತ್ತು ಎಕ್ಸ್ ಎರಡನ್ನೂ ಬರೆಯಲಾಗುತ್ತಿತ್ತು. ಈಗ ಟ್ವಿಟ್ಟರ್ಗೆ ಪೂರ್ಣವಾಗಿ ವಿದಾಯ ಹೇಳಲಾಗಿದೆ.
ಇಲಾನ್ ಮಸ್ಕ್ ಅವರು 2022ರಲ್ಲಿ ಟ್ವಿಟ್ಟರ್ ಅನ್ನು ಲಕ್ಷಾಂತರ ಕೋಟಿ ರುಪಾಯಿ ತೆತ್ತು ಖರೀದಿ ಮಾಡಿದ್ದಾರೆ. ಶೇ 70ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಅವರು ಕಂಪನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಆ್ಯಪ್ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಪ್ರೀಮಿಯಮ್ ಸಬ್ಸ್ಕ್ರಿಪ್ಷನ್ ಇತ್ಯಾದಿ ಅನೇಕ ಸರ್ವಿಸ್ಗಳನ್ನು ಸೇರಿಸಲಾಗಿದೆ.
ಇಲಾನ್ ಮಸ್ಕ್ ಅವರು ತಮ್ಮ ಎಕ್ಸ್ನಲ್ಲಿ ಒಂದು ಪೋಸ್ಟ್ ಮಾಡಿದ್ದು,ಎಲ್ಲಾ ಮುಖ್ಯ ಸಿಸ್ಟಂಗಳು ಎಕ್ಸ್ ಡಾಟ್ ಕಾಮ್ನಲ್ಲಿ ಇವೆ ಎಂದು ಹೇಳಿ ಒಂದು ವಿಶೇಷ ಎಕ್ಸ್ ಲೋಗೊದ ಚಿತ್ರ ಲಗತ್ತಿಸಿದ್ದಾರೆ. ಎಕ್ಸ್ನ ಈಗಿನ ಲೋಗೊ ಬದಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ.