ನಿಮ್ಮ ಸುದ್ದಿ ಬಾಗಲಕೋಟೆ
ಸರಕಾರ ಮಹಿಳೆಯರಿಗೂ ಸಹ ಸಮಾನ ಅವಕಾಶ ಕಲ್ಪಿಸಿದ್ದರಿಂದ ಇಂದು ಪ್ರತಿಯೊಂದ ಕ್ಷೇತ್ರದಲ್ಲಿಯೂ ಬದಲಾವಣೆ ನೋಡುತ್ತಿದ್ದೇವೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸನಾತನ ಕಾಲದಿಂದಲೂ ಸ್ತ್ರೀಯರಿಗೆ ಗೌರವ ಕೊಡಲಾಗುತ್ತಿದ್ದು, ಭಾರತ ದೇಶದಲ್ಲಿ ಸ್ತ್ರೀಯರಿಗೆ ಪೂಜ್ಯ ಸ್ಥಾನವಿದೆ. ತಾಯಿಯಾಗಿ, ಸಹಯೋದರಿಯಾಗಿ, ಪತ್ನಿಯಾಗಿ ಕುಟುಂಬ ನಿರ್ವಹಿಸುವದರ ಜೊತೆಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರಿತಿಸಿಕೊಂಡಿದ್ದಾಳೆ. ಇದನ್ನು ಗಮನಿಸಿದಾಗ ಸ್ತ್ರೀ ಅಬಲೆಯಲ್ಲ ಸಬಲೆ ಎನ್ನುವ ಮಾತು ದಿಟವಾಗಿದೆ ಎಂದರು.
ಇಂದು ಪ್ರತಿ ಕ್ಷೇತ್ರದಲ್ಲಿಯೂ ಅಡುಗೆ ಮನೆಗೆ ಸೀಮಿತರಾಗಿದ್ದ ಮಹಿಳೆ ಇಂದು ಅಂತರೀಕ್ಷಾ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾಳೆ. ಸ್ತ್ರೀಶಕ್ತಿ ಅಮೋಘವಾಗಿದೆ. ಇಂದು ಅನೇಕ ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿರುವದರಿಂದ ಅವರಲ್ಲಿರುವ ಕತೃತ್ವ ಶಕ್ತಿ ಇಮ್ಮಡಿಗೊಂಡಿದೆ. ಸರಕಾರ ಮಹಿಳೆಯರಿಗಾಗಿಗೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಶಿಕ್ಷಣ ಪಡೆಯುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಾಗಬೇಕು. ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರವು ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಅಡುಗೆ ಕೆಲಸದಿಂದ ಹಿಡಿದು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಮೀಳುನಾಡಿನ ಟೋಲ್ ನಾಕಾದಲ್ಲಿಯೂ ಮಹಿಳೆ ಕೆಲಸ ಮಾಡುತ್ತಿರುವುದನ್ನು ನೋಡಿದ್ದೇವೆ. ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ಪ್ರತಿಯೊಂದು ಸ್ಥಳಲ್ಲಿ ಭದ್ರತಾ ಸಿಬ್ಬಂದಿ ಕಾಣುತ್ತಿದ್ದೇವೆ. ಇವುಗಳನ್ನೇಲ್ಲಾ ನೋಡಿದಾಗ ಪುರುಷರಿಗೆ ಸಮಾನದಾವ ಕೆಲಸ ಮಹಿಳೆಯೂ ಕೂಡಾ ಮಾಡುತ್ತಿದ್ದಾಳೆ ಎಂದರು.
ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಮಾತನಾಡಿ ಭಾರತದ ದೇಶದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ ಎಂಬುದಕ್ಕೆ ಇಬ್ಬರು ರಾಷ್ಟ್ರಪತಿಗಳು ಹಾಗೂ ಒಬ್ಬರು ಪ್ರಧಾನಮಂತ್ರಿಗಳು ನೋಡಿದ್ದೇವೆ. ಅದೇ ರೀತಿ ಅಂತರೀಕ್ಷಾಯಾನ, ಪೈಲಟ್, ರಕ್ಷಣಾ ಕಾರ್ಯದಲ್ಲಿ ಕಾಣುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಿಳೆಯರಿಗಾಗಿಯೇ ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಮಾತನಾಡಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಇವೆ. ಆದರೆ ಅವುಗಳನ್ನು ಪಡೆದುಕೊಳ್ಳುತ್ತಿಲ್ಲ. ಮಹಿಳೆ ನಾನು ವಿದ್ಯೆ ಕಲಿತಿಲ್ಲವೆಂದು ಹಿಂಜರಿಯುವಂತಿಲ್ಲ. ಎಲ್ಲವೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಎಲ್ಲಿಯಾದರೂ ಅಭಿವೃದ್ದಿ ಕೆಲಸ ನೋಡಿದ್ದೇವೆ ಎಂದಲ್ಲಿ ಅಲ್ಲಿ ಮಹಿಳೆಯ ಪಾತ್ರ ಇರುತ್ತದೆ. ಮಕ್ಕಳ ಅಪೌಷ್ಠಿಕತೆಗೆ ನಿರ್ಮೂಲನೆಗೆ ತಾಯಂದಿರ ಪಾತ್ರ ಮುಖ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ಮಾತನಾಡಿ ಕಾನೂನಿನಡಿಯಲ್ಲಿ ಮಹಿಳೆಯರಿಗೆ ಸಮಾನತೆ ನೀಡಲಾಗಿದೆ. ಆ ಹಕ್ಕನ್ನು ಪಡೆದುಕೊಳ್ಳುತ್ತಿಲ್ಲ. ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಅಧಿಕಾರ ಮಾತ್ರ ಅನುಭವಿಸುತ್ತಿಲ್ಲ. ಜಿಲ್ಲೆಯಲ್ಲಿ 195 ಗ್ರಾಮ ಪಂಚಾಯತಿ ಪೈಕಿ 40 ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಸ್ ಹಾಗೂ ಮೆಟ್ರೋದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಂಗೋಲಿ ಮತ್ತು ಅಡುಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಡಿವಾಯ್‍ಪಿಸಿಯ ಜಿಲ್ಲಾ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಗುರಮ್ಮ ಸಂಕೀನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅಮರೇಶ ಸೇರಿದಂತೆ ಎಲ್ಲ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
*ಮಹಿಳಾ ಸಾಧಕರಿಗೆ, ಉತ್ತಮ ಸ್ತ್ರೀಶಕ್ತಿ ಸಂಘಗಳಿಗ ಸನ್ಮಾನ*
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಶಿಲ್ಪಾ ಎರಾಶಿ, ಸುನಂದ ಪಾಟೀಲ, ಮಾಲಾ ಬಾವಲತ್ತಿ (ಸಮಾಜಿಕ ಕ್ಷೇತ್ರ), ಮಂಜುಳಾ ಕಾಳಪ್ಪ ಬುಳ್ಳ (ಸ್ವಯಂ ಉದ್ಯೋಗ), ಉತ್ತಮ ಸ್ತ್ರೀಶಕ್ತಿ ಸಂಘಗಳಾದ ಬಾಗಲಕೋಟೆಯ ಆಶಾದೀಪ ಸ್ತ್ರೀಶಕ್ತಿ ಸಂಘ, ಬಾದಾಮಿಯ ಶಾರದಾ ದೇವಿ ಸ್ತ್ರೀಶಕ್ತಿ ಸಂಘ, ಜಮಖಂಡಿಯ ದಾನೇಶ್ವರಿ ಸ್ತ್ರೀಶಕ್ತಿ ಸಂಘ, ಮುಧೋಳನ ಕಸ್ತೂರಿಬಾ ಸ್ತ್ರೀಶಕ್ತಿ ಸಂಘ, ಬೀಳಗಿಯ ಪಾಂಡುರಂಗ ಸ್ತ್ರೀಶಕ್ತಿ ಸಂಘ, ಹುನಗುಂದ ಬಸವೇಶ್ವರ ಸ್ತ್ರೀಶಕ್ತಿ ಸಂಘಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.
*ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ಸನ್ಮಾನ*
——————————————
ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ರತ್ನಾ ಬಬಲೇಶ್ವರ, ಸುಮಾ ಬಾಳವ್ವಗೋಳ್, ಯಮನವ್ವ ಸರಕಾರ, ಶೃತಿ ಮಿಣಜಗಿ, ಲಲಿತಾ ಪತ್ತಾರ, ಭಾಗ್ಯಶ್ತಿ ಯಡಹಳ್ಳಿ, ಸಹಾಯಕಿಯರಾದ ಭಾಗವ್ವ ಚವ್ಹಾಣ, ಜುಬೇದಾ ಮುಲ್ಲಾ, ಶಿವಗಂಗವ್ವ ಚಿನಗುಂಡಿ, ರೇಣುಕಾ ಕುಸುಬಿ, ಶಂಕ್ರವ್ವ ಹಳ್ಯಾಳ, ಹನಮವ್ವ ದಾಸರ ಅವರನ್ನು ಸನ್ಮಾನಿಸಲಾಯಿತು.
ಮತಗಟ್ಟೆ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ರಾಜ್ಯಪಾಲರಿಂದ ಪಾರಿತೋಷಕ ಪಡೆದ ವಿಜಯಲಕ್ಷ್ಮೀ ಹೊನಕೇರಿ ಅವರನ್ನು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್ ಇದ್ದರು.