This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Crime NewsEntertainment NewsLocal NewsState News

ಮಾನಹಾನಿ ಹೇಳಿಕೆ ನೀಡದಂತೆ ಕೋರ್ಟ್ ಸೂಚನೆ ವಿಚಾರಣೆ ಅ.೯ ಕ್ಕೆ ಮುಂದೂಡಿಕೆ

ಬೆಂಗಳೂರು

ಚಿತ್ರನಟ ಕಿಚ್ಚ ಸುದೀಪ್‌ (Kiccha Sudeep) ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಮಾಪಕರಾದ ಎಂ.ಎನ್.ಕುಮಾರ್ (Producer MN Kumar), ಎನ್.ಎಂ.ಸುರೇಶ್ (NM Suresh) ಅವರಿಗೆ ಆದೇಶ ನೀಡಿದೆ.

ಇವರಿಬ್ಬರು ನೀಡುತ್ತಿರುವ ಮಾನಹಾನಿಕರ ಹೇಳಿಕೆಗಳನ್ನು ತಡೆಯಬೇಕು ಎಂದು ಸುದೀಪ್‌ ಅವರು ಸಿವಿಲ್‌ ಕೋರ್ಟ್‌ಗೆ ಮಧ್ಯಂತರ ಅರ್ಜಿ (Interlocutory Application) ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ 11ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ (XI Addl. City Civil and Sessions Court) ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಇಂಜಂಕ್ಷನ್‌ ಮೂಲ ಪ್ರಕರಣದ ತೀರ್ಪು ಬರುವವರೆಗೂ ಚಾಲ್ತಿಯಲ್ಲಿರುತ್ತದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 9ಕ್ಕೆ ಮುಂದೂಡಲಾಗಿದೆ.

ಕಿಚ್ಚ ಸುದೀಪ್‌ ಅವರು ಮುಂಗಡ ಹಣ ಪಡೆದು ಕಾಲ್‌ಶೀಟ್‌ ನೀಡಿಲ್ಲ ಎಂದು ನಿರ್ಮಾಪಕ ಎಂನ್‌ ಕುಮಾರ್‌ ಅವರು ಆರೋಪ ಮಾಡುವ ಮೂಲಕ ಹುಟ್ಟಿಕೊಂಡ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ನಿರ್ಮಾಪಕರಾದ ಎಂ.ಎನ್‌. ಕುಮಾರ್‌, ಎನ್‌ಎಂ ಸುರೇಶ್‌ ಸೇರಿದಂತೆ ಹಲವು ನಿರ್ಮಾಪಕರು ಸುದೀಪ್‌ ವಿರುದ್ಧ ಮುಗಿಬಿದ್ದಿದ್ದರು. ತಾವು ಹಿಂದೆ ಮುಂಗಡ ಹಣ ನೀಡಿದ್ದು, ಸುದೀಪ್‌ ಅವರು ಕಾಲ್‌ಶೀಟೂ ನೀಡದೆ, ಹಣವನ್ನೂ ವಾಪಸ್‌ ನೀಡದೆ ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ರವಿಚಂದ್ರನ್‌, ಚಿತ್ರ ನಿರ್ಮಾಪಕರ ಸಂಘ ಸೇರಿದಂತೆ ಹಲವು ಹಿರಿಯರು ಪ್ರಯತ್ನ ನಡೆಸಿದ್ದರು. ಆದರೆ, ನಿರ್ಮಾಪಕರು ತಮ್ಮ ಆರೋಪಗಳನ್ನು ಮುಂದುವರಿಸಿದ್ದರು. ಈ ಹಂತದಲ್ಲಿ ಸುದೀಪ್‌ ಕೂಡಾ ಆಕ್ರೋಶಿತರಾಗಿ ಇದನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಬೇಡ. ಕೋರ್ಟ್‌ನಲ್ಲೇ ತೀರ್ಮಾನವಾಗಲಿ. ಇದರಿಂದ ಇನ್ನು ಮುಂದೆ ಆರೋಪ ಮಾಡುವವರು ಯೋಚನೆ ಮಾಡಲು ಅವಕಾಶವಾಗುತ್ತದೆ. ಹೀಗಾಗಿ ನ್ಯಾಯಾಲಯದ ಮೂಲಕವೇ ನ್ಯಾಯ ಪಡೆಯುವುದಾಗಿ ಪ್ರಕಟಿಸಿದ್ದರು.

ನ್ಯಾಯಕ್ಕಾಗಿ ಕೋರ್ಟ್‌ ಮೊರೆ ಹೊಕ್ಕ ಸುದೀಪ್‌
ಎಂಎನ್‌ ಕುಮಾರ್‌ ಅವರು ತಾನು ಮುಂಗಡ ಪಡೆದು ವಂಚಿಸಿದ್ದೇನೆ ಎಂಬ ಅರ್ಥದಲ್ಲಿ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಇದರಿಂದ ತನ್ನ ಮಾನಹಾನಿ ಆಗಿದೆ ಎಂದು ಸುದೀಪ್‌ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಎಂ.ಎನ್‌. ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಎನ್‌ ಎಂ ಸುರೇಶ್‌ ಕೂಡಾ ಭಾಗಿಯಾಗಿದ್ದರಿಂದ ಅವರನ್ನೂ ಕೋರ್ಟ್‌ಗೆ ಎಳೆಯಲಾಗಿತ್ತು.

ಆಗಸ್ಟ್​ 10ರಂದು ನಡೆದ ವಿಚಾರಣೆಯ ವೇಳೆ ಸುದೀಪ್​ ಅವರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಬಂದು ಹೇಳಿಕೆ ದಾಖಲಿಸಿದ್ದರು. ದಾವೆಯ ವಿಚಾರಣೆ ನಡೆಸಿದ ಕೋರ್ಟ್‌ ಆಗಸ್ಟ್‌ 26ರಂದು ಕೋರ್ಟ್‌ಗೆ ಹಾಜರಾಗುವಂತೆ ಇಬ್ಬರೂ ನಿರ್ಮಾಪಕರಿಗೆ ಸಮನ್ಸ್‌ ನೀಡಿತ್ತು.

ಈ ವೇಳೆ ಸುದೀಪ್‌ ಪರ ವಕೀಲರು ಆ ಸಂದರ್ಭದಲ್ಲಿ ಮಾತನಾಡಿ ‘ಸುದೀಪ್‌ ಅವರು ಕಾನೂನಿನ ಪ್ರಕಾರವಾಗಿ ಕೋರ್ಟ್‌ಗೆ ಬಂದು ಹೇಳಿಕೆ ನೀಡಿದ್ದಾರೆ. ಮಾನಹಾನಿ ಆಗಿದ್ದಕ್ಕೆ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ. ಈ ಹಂತದಲ್ಲಿ ರಾಜಿಗೆ ಯಾವುದೇ ಅವಕಾಶ ಇಲ್ಲ’ ಎಂದಿದ್ದರು.

ಇಷ್ಟೆಲ್ಲ ವಿದ್ಯಮಾನಗಳ ನಡುವೆಯೂ ಮಾತಿನ ದಾಳಿ ಮುಂದುವರಿದ ಹಿನ್ನೆಲೆಯಲ್ಲಿ ತನ್ನ, ಮತ್ತು ಕುಟುಂಬದ ಬಗ್ಗೆ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡಬೇಕು ಎಂದು ಕೋರಿ ಸುದೀಪ್‌ ಮಧ್ಯಂತರ ಅರ್ಜಿ (Interlocutory Application) ಸಲ್ಲಿಸಿದ್ದರು. Interlocutory Application ಅಂದರೆ ಮೂಲ ದಾವೆಯ ವಿಚಾರಣೆ ನಡೆಯುತ್ತಿರುವಾಗಲೇ ಅದರ ಉಲ್ಲಂಘನೆ, ಸಮಕಾಲೀನ ಪ್ರಕ್ರಿಯೆಗಳಿಗೆ ಪೂರಕವಾಗಿ ಸಲ್ಲಿಸಲಾಗುವ ಅರ್ಜಿ. ಇದೀಗ ಆ ಪ್ರಕರಣದ ವಿಚಾರಣೆ ನಡೆದು ಇಂಜಂಕ್ಷನ್‌ ನೀಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 9ಕ್ಕೆ ಮುಂದೂಡಲಾಗಿದೆ. ಉಳಿದಂತೆ ಆಗಸ್ಟ್‌ 26ರಂದು ಹಾಜರಾಗಬೇಕು ಎಂದು ನಿರ್ಮಾಪಕರಿಬ್ಬರಿಗೆ ನೀಡಿದ ಸಮನ್ಸ್‌ ಹಾಗೇ ಮುಂದುವರಿಯಲಿದೆ.