This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಪಾರಮ್ಯ ಮೆರೆದ ಅನ್ನದಾತರ ಪುತ್ರಿಯರು

ಅಕ್ಕಮಹಾದೇವಿ ಮಹಿಳಾ ವಿವಿಯ 11ನೇ ಘಟಿಕೋತ್ಸವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹಿಳಾ ಶಿಕ್ಷಣ ನಿಧಿ
ಪಾರಮ್ಯ ಮೆರೆದ ಅನ್ನದಾತರ ಪುತ್ರಿಯರು
ವಿಜಯಪುರ: ಹಳ್ಳಿ ಕೃಷಿ ಕುಟುಂಬದಲ್ಲಿ ಹುಟ್ಟಿದ ನಾವೆಲ್ಲ ವಿವಿಯಲ್ಲಿ ಓದಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುತ್ತೇವೆ ಎಂದು ಕನಸು ಮನಸ್ಸಿನಲ್ಲಿ ನಿರೀಕ್ಷಿಸಿರಲಿಲ್ಲ. ಆದರೆ ವಿವಿಗೆ ಬಂದ ಮೇಲೆ ಓದಲಿಕ್ಕೆ ಇರುವ ಸೌಲಭ್ಯಗಳನ್ನು ಪಡೆದು, ಜ್ಞಾನ ದಾಹ ತಣಿಸಿಕೊಳ್ಳುವ ಮೂಲಕ ನಾಲ್ಕು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಕ್ಕೆ ಅತೀವ ಸಂತಸವಾಗುತ್ತಿದೆ.
ಇಲ್ಲಿನ ಅಕ್ಕಮಹಾದೇವಿ ವಿವಿ 11ನೇ ಘಟಿಕೋತ್ಸವದಲ್ಲಿ ಒಂದಲ್ಲ, ಎರಡಲ್ಲ. ನಾನಾ ವಿಭಾಗದಿಂದ ನಾಲ್ಕು ಚಿನ್ನದ ಪದಕ ಮುಡಿಗೇರಿಸಿಕೊಂಡ ನಾನಾ ವಿಭಾಗದ ಚಿನ್ನದ ಹುಡುಗಿಯರ ಚಿನ್ನದಂಥ ಮಾತುಗಳಿವು.
ಮಳೆ ಆಶ್ರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ರೈತರ ಮಕ್ಕಳು. ಅಂಥ ರೈತರ ಮಕ್ಕಳು ವಿಶ್ವವಿದ್ಯಾಲಯದಲ್ಲಿ ಎಲ್ಲರನ್ನೂ ಹಿಂದಿಕ್ಕಿ ವೇದಿಕೆಯಲ್ಲಿದ್ದ ಗಣ್ಯರಿಂದ ಚಿನ್ನದ ಪದಕ ಸ್ವೀಕರಿಸುತ್ತಿದ್ದರೆ, ಅವರನ್ನು ಹೆತ್ತ ಬಡ ಕೃಷಿಕ ತಂದೆ-ತಾಯಿಗಳು ಮಗಳ ಸಾಧನೆಯನ್ನು ಎವೆಯಿಕ್ಕದೇ ನೋಡುತ್ತಲೇ ಆನಂದಭಾಷ್ಪ ಹರಿಸಿದ್ದು ವಿಶೇಷವಾಗಿತ್ತು.
ಕನ್ನಡ ಸ್ನಾತಕೋತ್ತರ ಅಧ್ಯಯನದಲ್ಲಿ 4 ಚಿನ್ನದ ಪದಕ ಪಡೆದ ಲಿಂಗಸ್ಗೂರ ತಾಲೂಕಿನ ಕಸಬಾಲಿಂಗಸ್ಗೂರ ಗ್ರಾಮದ ರೈತ ನಾಗಪ್ಪ ದುರ್ಗಮ್ಮ ದಂಪತಿಯ ಸುಪುತ್ರಿ ಪದ್ಮಾವತಿ ಯತಗಲ್ ಸಂತಸಕ್ಕೆ ಪಾರವೇ ಇರಲಿಲ್ಲ. ನಮ್ಮ ಕುಟುಂಬದಲ್ಲೇ ಅಷ್ಟಿಷ್ಟು ಓದಿದವರನ್ನು ಬಿಟ್ಟರೆ, ಯಾರೂ ಸ್ನಾತಕೋತ್ತರ ಪದವಿ ಪಡೆದಿಲ್ಲ. ಅಂಥದ್ದರಲ್ಲಿ ನಾನು ವಿಜಯಪುರದ ಅಕ್ಕನ ವಿವಿಯಲ್ಲಿ ಓದಿ ಸ್ನಾತಕೋತ್ತರ ಪದವಿ ಓದಿ, ಹೆಚ್ಚು ಸ್ಕೋರ್ ಮಾಡುವ ಮೂಲಕ 4 ಚಿನ್ನದ ಪದಕ ಮುಡಿಗೇರಿಸಿಕೊಂಡ ಈ ಕ್ಷಣ ಜೀವಮಾನದಲ್ಲಿ ಮರೆಯಲಾರದಂಥದ್ದು ಎಂದು ಸಂತಸ ಹಂಚಿಕೊಂಡರು.
ಇದಕ್ಕೆಲ್ಲ ವಿಜಯಪುರದಲ್ಲಿ ಸ್ಥಾಪಿತ ಅಕ್ಕನ ವಿವಿ ಹಾಗೂ ಹಾಸ್ಟೆಲ್. ಈ ಸೌಲಭ್ಯಗಳಿಲ್ಲದಿದ್ದರೆ, ಪಿಜಿ ಓದಲಿಕ್ಕಾಗುತ್ತಿರಲಿಲ್ಲ ಎನ್ನುವ ಮೂಲಕ ಅಕ್ಕನ ವಿವಿಯ ಮಹತ್ವವನ್ನು ರಾಜ್ಯಕ್ಕೆ ರವಾನಿಸಿದರು.
ಪದ್ಮಾವತಿ ಮಾದರಿಯಲ್ಲೇ ಅರ್ಥಶಾಸದಲ್ಲಿ 4 ಚಿನ್ನದ ಪದಕ ಗಿಟ್ಟಿಸಿಕೊಂಡ ಜಯಶ್ರೀ ಬಡಕಪ್ಪನವರ ಎಂಬ ಬಡ ಕೃಷಿ ಕುಟುಂಬದ ಯುವತಿ ಮಾತ್ರ ಅದ್ಭುತ ಸಾಧನೆ ಮಾಡಿದ್ದಾರೆ.
ರೈತನ ಮಗಳಾಗಿ ಈ ಸಾಧನೆ ಮಾಡಿದ್ದಕ್ಕೆ ಇನ್ನಿಲ್ಲದ ಹೆಮ್ಮೆ ಎನಿಸುತ್ತದೆ. ಅಣ್ಣನ ಪ್ರೋತ್ಸಾಹ ಹಾಗೂ ಪ್ರಾಧ್ಯಾಪಕರ ಮಾರ್ಗದಶನದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಬೀಗಿದ್ದಲ್ಲದೇ, ಭವಿಷ್ಯದ ದಿನಗಳಲ್ಲಿ ಅರ್ಥಶಾಸ ಪ್ರಾಧ್ಯಾಪಕಿಯಾಗುವ ಕನಸು ಹೊಂದಿದ್ದಾರೆ.
ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ಅಧ್ಯಯನ ವಿಭಾಗದಲ್ಲಿ ರೈತರ ಮಕ್ಕಳೇ ಪಾರಮ್ಯ ಮೆರೆದಿದ್ದು, ಈ ವಿಭಾಗದಲ್ಲಿ ಮುಧೋಳದ ಜಯಶ್ರೀ ಗುಜ್ಜಣ್ಣವರ ಅವರು 3 ಚಿನ್ನದ ಪದಕ ಬಾಚಿಕೊಂಡು ಚಿನ್ನದ ನಗೆ ಬೀರಿದ್ದಾರೆ.
ಆಹಾರ ಸಂಸ್ಕರಣಾ ವಿಭಾಗದ ಪ್ರಾಧ್ಯಾಪಕಿಯಾಗುವ ಹೊಂಗನಸು.
ತಂದೆ ಗೋವಿಂದಪ್ಪ ಕೃಷಿ ಮೇಲೆ ಅವಲಂಬನೆ. ಅಂಥ ರೈತನ ಮಗಳಿಗೆ ಚಿನ್ನದ ಪದಕ ಬಂದಿದ್ದಕ್ಕೆ ರೈತ ಗೋವಿಂದಪ್ಪ ಅವರಿಗೆ ಸ್ವರ್ಗ ಮೂರೇ ಗೈಣು ಉಳಿದಿತ್ತು. ಮಗಳ ಚಿನ್ನದಂಥ ಸಾಧನೆ ಕಣ್ತುಂಬಿಸಿಕೊಂಡು ಹೆಮ್ಮೆಯಿಂದ ಬೀಗಿದರು.
ಪತ್ರಕರ್ತನ ಮಗಳಿಗೂ ಚಿನ್ನ
ಇವರೊಟ್ಟಿಗೆ ಪತ್ರಕರ್ತ ಸುಶಿಲೇಂದ್ರ ನಾಯಕ ಅವರ ಮಗಳು ಸುಷ್ಮಾ ನಾಯಕ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ವಿಶೇಷವಾಗಿ ಆಂಗ್ಲ ಮಾಧ್ಯಮದಲ್ಲಿ ಚಿನ್ನದ ಪದಕ ಪಡೆದು, ಚಿನ್ನದ ನಗೆ ಬೀರಿದ್ದು ವಿಶೇಷವಾಗಿತ್ತು. ಏಕೈಕ ಪುತ್ರಿ ಸುಷ್ಮಾ ಸಾಧನೆ ಮನೆತನದ ಗೌರವ ಹೆಚ್ಚಿಸಿದ್ದಕ್ಕೆ ಸಂತಸವಾಗುತ್ತದೆ ಎಂದು ತಂದೆ ಸುಶಿಲೇಂದ್ರ ನಾಯಕ ಹೆಮ್ಮೆಯಿಂದ ಹೇಳಿದರು.

ಮಹಿಳೆಯರ ಶಿಕ್ಷಣಕ್ಕೆ ಹೊಸ ಆಯಾಮ
ಮಹಿಳಾ ಶಿಕ್ಷಣದಿಂದ ಮಾತ್ರ ಆರೋಗ್ಯವಂತ ಕುಟುಂಬಗಳನ್ನು ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಶಿಕ್ಷಣಾವಕಾಶ ಹೆಚ್ಚಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹಿಳಾ ಶಿಕ್ಷಣ ನಿಧಿ ಮೂಲಕ ಯೋಜನೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳೆಯರು ಶಿಕ್ಷಣದ ಪರಿಧಿಯಲ್ಲಿ ಬರುತ್ತಾರೆಂದು ಯುಜಿಸಿ ಸದಸ್ಯ, ರಾಷ್ಟ್ರೀಯ ಶಿಕ್ಷಣ ನೀತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ ತಿಳಿಸಿದರು.
ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಶನಿವಾರ ನಡೆದ 11ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆನ್‌ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಸಬಲಗೊಳಿಸುವ ಪ್ರಯತ್ನದಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಪೋಷಕರು ಮತ್ತು ಸಮಾಜದ ಪ್ರತಿಯೊಬ್ಬರೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020 ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಶಿಕ್ಷಕರಿಗೆ ಹೆಚ್ಚಿನ ಆದ್ಯತೆ
ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಉನ್ನತ ವ್ಯಾಸಂಗವನ್ನು ಮುಗಿಸಿರುವ ನೀವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬಹುದು. ನೀವೇನೇ ಮಾಡಿದರೂ ಅದು ವಿಶಿಷ್ಟವಾಗಿರಬೇಕು. ನಿಮ್ಮ ಚಿಂತನೆಯಲ್ಲಿ ಹೊಸತಿರಬೇಕು ಎಂದು ನವ ಪದವೀಧರರಿಗೆ ಪ್ರೊ.ಶ್ರೀಧರ ಸಲಹೆ ನೀಡಿದರು.
ಹಂಗಾಮಿ ಕುಲಪತಿ ಪ್ರೊ.ಓಂಕಾರ ಕಾಕಡೆ ಚಿನ್ನದ ಪದಕ ವಿಜೇತರು, ಪಿಎಚ್‌ಡಿ ಪದವೀಧರರಿಗೆ ಪದಕ ಹಾಗೂ ಪದವಿ ಪ್ರಮಾಣ ಪತ್ರ ವಿತರಿಸಿದರು. ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ವೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನ್‌ಗಳು ಇದ್ದರು.
ಮಹಿಳಾ ವಸ್ತು ಸಂಗ್ರಹಾಲಯ
ವಿಜಯಪುರ: ಮಹಿಳಾ ಸಬಲೀಕರಣದ ಉದ್ದೇಶದಿಂದ ಆರಂಭವಾಗಿರುವ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಕೆಲವೇ ತಿಂಗಳಲ್ಲಿ ಮಹಿಳಾ ವಸ್ತುಸಂಗ್ರಹಾಲಯ ಕಾರ್ಯಾರಂಭ ಮಾಡಲಿದೆ ಎಂದು ಹಂಗಾಮಿ ಕುಲಪತಿ ಪ್ರೊ.ಓಂಕಾರ ಕಾಕಡೆ ತಿಳಿಸಿದರು.
ವಿವಿಯ 11ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಸ್ತು ಸಂಗ್ರಹಾಲಯದ ರೂಪರೇಷೆಗಳ ನೀಲನಕ್ಷೆಯನ್ನು ತಜ್ಞರು ಸಿದ್ಧಪಡಿಸಿದ್ದಾರೆ. ಮಹಿಳೆಯರ ಜ್ಞಾನ, ಕೌಶಲ್ಯ ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಬಿಂಬಿಸುವ ವಸ್ತುಸಂಗ್ರಹಾಲಯ ಆಗಲಿದೆ. 8 ಕೋಟಿ ಅನುದಾನದಲ್ಲಿ ಬಹುಪಯೋಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಭಾ ಭವನ ನಿರ್ಮಿಸಲಾಗಿದೆ. ರಸಾಯನ ಶಾಸ ವಿಭಾಗ, ಸಸ್ಯಶಾಸ ವಿಭಾಗ, ವಸತಿ ನಿಲಯ, ಹಿಂದಿ ಭವನ ಮುಂತಾದ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ಮಂಡ್ಯ ವಿಸ್ತರಣಾ ಕೇಂದ್ರದ ಆಡಳಿತ ಕಟ್ಟಡವು 5 ಕೋಟಿ ರೂ.ಅನುದಾನದಲ್ಲಿ ಪ್ರಗತಿಯಲ್ಲಿದೆ. ಸಿಂಧನೂರಿನಲ್ಲಿ 13 ಕೋಟಿ ರೂ. ವೆಚ್ಚದ ಆಡಳಿತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ವಿವಿ ಪ್ರಸಾರಾಂಗ ಮೂಲಕ ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗೆ ಕನ್ನಡ ಮತ್ತು ಇಂಗ್ಲಿಷ್‌ನ ಒಟ್ಟು 12 ಪಠ್ಯಪುಸ್ತಕಗಳನ್ನು ಪ್ರಕಟಿಸಲಾಗಿದೆ.ಪ್ರಸ್ತುತ ಪದವಿಯ 1 ಮತ್ತು 2ನೇ ಸೆಮಿಸ್ಟರ್ ಹಿಂದಿ ಭಾಷಾ ಪಠ್ಯಪುಸ್ತಕಗಳು ಪ್ರಕಟಗೊಂಡಿದ್ದು ಉಳಿದ ಸೆಮಿಸ್ಟರ್‌ನ ಪಠ್ಯಗಳು ಮುದ್ರಣ ಹಂತದಲ್ಲಿವೆ ಎಂದು ವಿವರಿಸಿದರು.