This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ

ಕೃಷಿ ಅಭಿಯಾನ : ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ

ನಿಮ್ಮ ಸುದ್ದಿ ಬಾಗಲಕೋಟೆ

ಕೃಷಿ ಉತ್ಪಾದನೆ ಹೆಚ್ಚಿಸಿ, ಅವಶ್ಯವಿರುವ ತಂತ್ರಜ್ಞಾನ, ಏಕಗವಾಕ್ಷ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಕೃಷಿ ಅಭಿಯಾನದಡಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೃಷಿ ಅಭಿಯಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ, ತೋಟಗಾರಿಕೆ ಇಲಾಖೆಯೊಂದಿಗೆ ಪೂರಕ ಉಪ ಕಸಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮದ ಕ್ರೀಯಾ ಯೋಜನೆ ಸಿದ್ದಪಡಿಸಲು ಸೂಚಿಸಿದರು.

ಈ ಯೋಜನೆ ಮೂಲಕ ಕೃಷಿ ಹಾಗೂ ಬೇಸಾಯ ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಬೇಕು. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಹಾಗೂ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಏರ್ಪಡಿಸಬೇಕು. ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು, ರೈತರು ಆತ್ಮ ಗುಂಪುಗಳು, ಸಾವಯವ ಕೃಷಿ ಸಂಘಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳ ಜೊತೆಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ, ವಿಷಯಗಳು ಹೆಚ್ಚಾಗಿ ರೈತರು ಎದುರಿಸುತ್ತಿರುವದರಿಂದ ಗ್ರಾಮ ಲೆಕ್ಕಿಗರು, ಕಂದಾಯ ಇಲಾಖಾ ಸಿಬ್ಬಂದಿಗಳು ಕಡ್ಡಾಯವಾಗಿ ಅಭಿಯಾನದಲ್ಲಿ ಭಾಗವಹಿಸತಕ್ಕದ್ದು ಎಂದರು.

ಪ್ರತಿ ಹೋಬಳಿಯಲ್ಲಿ ಗ್ರಾಮ ಪಂಚಾಯತಿವಾರು ಕಾರ್ಯತಂಡವನ್ನು ರಚಿಸಿ ಕ್ರೀಯಾ ಯೋಜನೆಯಂತೆ ಮೂರು ದಿನಗಳ ಕಾಲ ವಿಜ್ಞಾನಿ, ಅಧಿಕಾರಿಗಳನ್ನೊಳಗೊಂಡ ತಂಡಗಳಿಂದ ಸ್ಥಳೀಯ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಬೇಕು. ಕೃಷಿ ತಂತ್ರಜ್ಞಾನ ಮಾಹಿತಿ, ಕೌಶಲ್ಯ ಪ್ರಾತ್ಯಕ್ಷಿಕೆ, ಸಸ್ಯ ಸಂರಕ್ಷಣಾ ಆಂದೋಲನ, ಮಣ್ಣು ಆರೋಗ್ಯ ಅಬಿಯಾನ, ಆತ್ಮ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಸಾವಯವ ಭಾಗ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ತಲುಪಿಸುವ ಕಾರ್ಯವಾಗಬೇಕು ಎಂದರು.

ಬೆಳೆ ಸಮೀಕ್ಷೆ, ಬೆಳೆ ವಿಮೆ, ಕೃಷಿ ಸಾಲ, ಕೃಷಿ ಪರಿಕರಗಳು, ಕೃಷಿ ಯಂತ್ರೋಪಕರಣ, ಬಾಡಿಗೆ ಆಧಾರಿತ ಸೇವಾ ಕೇಂದ್ರ, ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳು, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಉಪಕರಣಗಳು, ಕೃಷಿ ಹಾಗೂ ಇತರೆ ಇಲಾಖೆಗಳ ಯೋಜನೆ, ಸವಲತ್ತು ಲಭ್ಯತೆ ಬಗ್ಗೆ, ಮಣ್ಣು ಮಾದರಿ ಸಂಗ್ರಹಣೆ, ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಸಂಚಾರಿ ಮಣ್ಣು ಮಾದರಿಗಳ ವಿಶ್ಲೇಷಣೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ರೈತರ ಕ್ಷೇತ್ರ ಪಾಠಶಾಲೆ, ಕೃಷಿ ಆಧಾರಿತ ಉಪ ಕಸಬುಗಳ ಮಾಹಿತಿಗಳು ಅಭಿಯಾನದಲ್ಲಿ ಒಳಗೊಂಡಿವೆ ಎಂದು ತಿಳಿಸಿದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಅವರು ಕೃಷಿ ಅಭಿಯಾನದ ಕುರಿತು ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಗಂಗಾಧರ ದಿವಟರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.