ಆಲಮಟ್ಟಿ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮೀನುಗಾರಿಕೆಗೆ ಅಭಿವೃದ್ಧಿಪಡಿಸಲು ಆಲಮಟ್ಟಿಯಲ್ಲಿ ಒಳನಾಡು ಮೀನಗಾರಿಕೆ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಸರಕಾರ ಮುಂದಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಅವಳಿ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಪ್ರತಿ ವರ್ಷ ಭರ್ತಿಯಾಗುತ್ತ ಬಂದಿದ್ದು, ಕೆಲ ಬಾರಿ ಪ್ರವಾಹ ಕೂಡ ಉಂಟಾಗಿದೆ. ಮಳೆಗಾಲದಲ್ಲಿ ಲಕ್ಷಾಂತರ ಕ್ಯುಸೆಕ್ ನೀರನ್ನು ಜಲಾಶಯದಿಂದ ನದಿ ಪಾತ್ರಕ್ಕೆ ಹರಿಸಿ ಪ್ರವಾಹ ನಿಯಂತ್ರಣ ಮಾಡುತ್ತ ಬರಲಾಗಿದೆ.
ಆಲಮಟ್ಟಿ ಜಲಾಶಯಕ್ಕೆ ನೀರಿನ ಕೊರತೆ ಉಂಟಾಗಿಲ್ಲ. ಜತೆಗೆ ಕೆರೆ ತುಂಬುವ ಯೋಜನೆಯಡಿ ನೂರಾರು ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ನಾನಾ ಕೆರೆಗಳಲ್ಲಿ ಒಳನಾಡು ಮೀನುಗಾರಿಕೆ ಕೈಗೊಳ್ಳಲು ವಿಪುಲ ಅವಕಾಶವಿದೆ.
ಮೀನುಗಾರಿಕಾ ಕೌಶಲಾಭಿವೃದ್ಧಿ ಕೇಂದ್ರದಲ್ಲಿಅಕ್ವಾಪಾರ್ಕ್, ಮೀನುಮರಿ ಉತ್ಪಾದನೆ ಘಟಕ, ಮೀನುಮರಿಗಳ ಆಹಾರ ತಯಾರಿಕೆ ಘಟಕ, ಮರಿಗಳನ್ನು ಸಾಕಾಣಿಕೆ ಮಾಡಲು ಕೊಳಗಳ ನಿರ್ಮಾಣ, ಮೀನು ಮರಿಗಳನ್ನು ಮಾರಾಟಕ್ಕೆ ವಾಹನಗಳು, ಸಂಸ್ಕರಣಾ ಘಟಕ, ಶೀಥಿಲೀಕರಣ ಘಟಕ, ತರಗತಿಗಳು, ತರಬೇತಿ ಕೊಠಡಿ, ವಸತಿ ನಿಲಯಗಳ ನಿರ್ಮಾಣವಾಗಲಿವೆ ಎಂದು ಮಾಹಿತಿ ಕಂಡು ಬಂದಿದೆ.