This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Crime NewsLocal NewsState News

Halashri Swameeji: ಹಾಲ ಮಠದ ಚರಿತ್ರೆಯಲ್ಲಿ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!

Halashri Swameeji: ಹಾಲ ಮಠದ ಚರಿತ್ರೆಯಲ್ಲಿ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!

ಬೆಂಗಳೂರು: ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲ ಸಂಸ್ಥಾನ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯವರ ಬಂಧನ (Halashri swameeji Arrest) ಈ ಮಠದ ಅಕಳಂಕ ಚರಿತ್ರೆಯಲ್ಲೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಅತಿಯಾದ ರಾಜಕೀಯ ಆಸಕ್ತಿ, ಪ್ರಚಾರಪ್ರಿಯತೆಯಿಂದ ಕಿಂಗ್‌ ಮೇಕರ್‌ ತಾನೆಂದು ಬೀಗುತ್ತಿದ್ದ ಹಾಲಶ್ರೀ ಸ್ವಾಮೀಜಿ (Halashri Swameeji) ಈಗ ಕಟಕ್‌ನ ರೈಲ್ವೇ ನಿಲ್ದಾಣದಲ್ಲಿ ಏಕಾಂಗಿಯಾಗಿ ಕಾವಿ ಕಳಚಿಟ್ಟು ಟೀ ಶರ್ಟ್‌ ಹಾಕಿಕೊಂಡು ಅನಾಥನಾಗಿ ನಿಲ್ಲಬೇಕಾಗಿ ಬಂದಿದೆ ಎನ್ನುವುದು ಪ್ರಕರಣದ ಒಟ್ಟಾರೆ ವಿಶ್ಲೇಷಣೆ.

ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಹಾಲಶ್ರೀ ನಂಬರ್‌ ಮೂರನೇ ಆರೋಪಿ. ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ 1.5 ಕೋಟಿ ರೂ.ಯನ್ನು ಸ್ವೀಕರಿಸಿದ್ದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಟಿಕೆಟ್‌ಗೆ ಶಿಫಾರಸು ಮಾಡಲು ಅವರು ಕೇಳಿದ ಮೊತ್ತವಿದು. ಈಗ ಚೈತ್ರಾ ಟೀಮ್‌ ನಡೆಸಿದ ಉಳಿದ 3.5 ಕೋಟಿ ರೂ. ಗೋಲ್‌ಮಾಲ್‌ ಒಟ್ಟಾರೆ ಭಾಗಿದಾರನಾಗಿ ಕಳಂಕ ಹೊತ್ತು ನಿಂತಿದ್ದಾರೆ. ಎಂಥಾ ಪೀಠಕ್ಕೆ ಇವರೆಂಥಾ ಪೀಠಾಧಿಪತಿ ಎಂದು ಭಕ್ತರು ಬೇಸರದಿಂದ ಕೇಳುವಂತಾಗಿದೆ.

ಇದು ಪವಾಡದ ಮಠ, ಕಾಯಕ ಮಠ
ಹಿರೇಹಡಗಲಿ ಹಾಲ ಸಂಸ್ಥಾನ ಮಠ ಎನ್ನುವುದು ವೀರಶೈವ ಮಠ (Veerashaiva Matt) ಪರಂಪರೆಯ ಅಪೂರ್ವ ಮಠ. ಇದಕ್ಕೆ ಪುತ್ರ ವರ್ಗ ಮಠ ಎಂಬ ಹೆಸರೂ ಇದೆ. ಇಲ್ಲಿನ ಪೀಠಾಧಿಪತಿಗಳು ಮದುವೆಯಾಗಬಾರದು ಎಂಬ ನಿಯಮವಿಲ್ಲ. ನಿಜವೆಂದರೆ ಮದುವೆ ಆಗಬೇಕು ಎನ್ನುವುದೇ ಇಲ್ಲಿನ ನಿಯಮ! ಯಾಕೆಂದರೆ ಮಠದ ಶ್ರೀಗಳ ಪುತ್ರರೇ ಮಠದ ಉತ್ತರಾಧಿಕಾರಿಗಳು. ಇದೇ ಕಾರಣಕ್ಕೆ ಇದನ್ನು ಸಂಸಾರಿ ಮಠವೆಂತಲೂ ಸಂಸ್ಕಾರಿಕ ಮಠವೆಂತಲೂ ಕರೆಯುತ್ತಾರೆ.

Halasree swameeji and hala matt hirehadagali
ಇದಕ್ಕೆ ಅದೆಷ್ಟೋ ಶತಮಾನಗಳ ಇತಿಹಾಸವಿದೆ. ಶತಮಾನಗಳ ಹಿಂದೆ ಇಲ್ಲಿ ನಡೆಯುತ್ತಿದ್ದ ಪವಾಡ ಸದೃಶ ಘಟನೆಗಳ ಹಿನ್ನೆಲೆಯಲ್ಲಿ ಇದನ್ನು ಪವಾಡ ಮಠ ಎಂದೂ ಕರೆಯುತಿದ್ದರು.

ವೀರಶೈವ ಪರಂಪರೆಯ ಧಾರ್ಮಿಕ ಕಾರ್ಯ, ಸಾಮೂಹಿಕ ವಿವಾಹ, ಉಳ್ಳು ಗದ್ದುಗೆ ಮಹೋತ್ಸವ. ದಾಸೋಹ ಮೂಲಕ ಈ ಸಂಸ್ಥಾನ ಮಠ ತನ್ನ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಾಲ ಮಠ 100ಕ್ಕೂ ಹೆಚ್ಚು ಶಾಖಾ ಮಠಗಳನ್ನ ಹೊಂದಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

ಪೀಠಾಧಿಪತಿಗಳು ಉತ್ತಮ ಬೇಸಾಯಗಾರ
ಈಗ ಪೀಠಾಧಿಪತಿಗಳಾಗಿರುವ ಅಭಿನವ ಹಾಲಶ್ರೀ ಅವರ ತಂದೆ ಹಾಲ ವೀರಭದ್ರಜ್ಜ ಅವರು ಉತ್ತಮ ವ್ಯವಸಾಯಿಯಾಗಿದ್ದರು (Good Agriculturist). ಅವರ ಪುತ್ರ ಈಗಿನ ಅಭಿನವ ಹಾಲಶ್ರೀ (ವೀರಪ್ಪಜ್ಜ) ಅವರು ಕೂಡಾ ಇದರಲ್ಲಿ ಪಳಗಿದವರೆ. ಅಭಿನವ ಹಾಲಶ್ರೀ ತಂದೆಯ ಸಹೋದರರು ಹಾಲ ಸೋಮಜ್ಜ, ಸಿದ್ದಪ್ಪ, ಸಣ್ಣ ಹಾಲ ಸ್ವಾಮೀಜಿ ಕೂಡಾ ಕಠಿಣ ಶ್ರಮಜೀವಿಗಳೇ. ಮಠದ ಎಲ್ಲ ಶ್ರೀಗಳಿಗೆ ಸೇರಿದಂತೆ 40 ಎಕರೆ ಜಮೀನಿದೆ.

ಸರ್ವ ಧರ್ಮ ಸಮಭಾವದ ಪೀಠ
ಸರ್ವಧರ್ಮ ಸಮನ್ವಯವನ್ನು ಸಾರುವ ಶ್ರೇಷ್ಠ ಮಠ ಇದು. ಜಾತಿ, ಪಕ್ಷ ಮೀರುವಂತೆ ನಡೆದುಕೊಂಡ ಪರಂಪರೆ ಇದಕ್ಕಿದೆ. ಕಾಯಕವನ್ನೇ ನಂಬಿದವನಿಗೆ ಒಂದೇ ಜಾತಿ ಒಂದೇ ಧರ್ಮ ಎನ್ನುತ್ತಿತ್ತು ಹಾಲ ಮಠ. ಕಾಯಕ ಜೀವಿಗಳದ್ದು ಧರ್ಮ ಮೀರಿದ ಬದುಕು ಎನ್ನುವುದು ನಂಬಿಕೆ. ಮುಳ್ಳುಗದ್ದುಗೆ ಜಾತ್ರೆಯಲ್ಲಿ ಮುಸ್ಲಿಂ ಮತ್ತು ಎಲ್ಲ ಜಾತಿ ಜನಾಂಗೀಯರು ಜಾತ್ರೆಯ ಮುಂದಾಳತ್ವ ವಹಿಸುವುದು ಮಠದ ವಿಶೇಷ.

ಈ ಪರಂಪರೆಗೆ ಕೊಂಡಿಯಾಗದೆ ಕೊಳ್ಳಿ ಇಟ್ಟರೇ ಅಭಿನವ ಹಾಲಶ್ರೀ?
ವೀರಪ್ಪಜ್ಜ ಎಂಬ ಮೂಲ ನಾಮಾಂಕಿತವನ್ನು ಹೊಂದಿರುವ ಅಭಿನವ ಹಾಲಶ್ರೀಗಳು ಕೂಡಾ ಉತ್ತಮ ಬೇಸಾಯಗಾರ. ಕೃಷಿಯ ಬಗ್ಗೆ ಒಲವಿತ್ತು. ಆದರೆ, ಅದರ ಜತೆಗೆ ಮಠದ ಪರಂಪರೆಯ ಕೊಂಡಿಯನ್ನು ಸ್ವಲ್ಪ ಸ್ವಲ್ಪವೇ ಕಳಚಿಕೊಳ್ಳುತ್ತಾ, ಸೌಹಾರ್ಯ ಪರಂಪರೆ ಬಿಟ್ಟು ಹಿಂದುತ್ವದ ಅದರಲ್ಲೂ ಉಗ್ರ ಹಿಂದುತ್ವದ ಪ್ರತಿಪಾದಕರಾದರು.

ಬಹುಶ ಅವರ ರಾಜಕೀಯ ಮಹತ್ವಾಕಾಂಕ್ಷೆ ಅವರನ್ನು ಈ ನಿಟ್ಟಿನಲ್ಲಿ ಕರೆದುಕೊಂಡು ಹೋಯಿತೇ? ಗೊತ್ತಿಲ್ಲ. ಪ್ರಖರ ಹಿಂದುತ್ವವಾದಿಯಾಗಿ ಬದಲಾದ ಅವರು ಹಿಂದೂಪರ ಸಂಘಟನೆಗಳ ಮುಂಚೂಣಿ ಮುಖಂಡರ ಜೊತೆಗೆ ಗುರುತ್ತಿಸಿಕೊಳ್ಳಲು ಶುರು ಮಾಡಿದರು. ಪ್ರಖರ ಭಾಷಣ ಮೂಲಕ ರಾಜ್ಯಾದ್ಯಂತ ಫೈರ್‌ ಬ್ರಾಂಡ್‌ ಸ್ವಾಮೀಜಿ ಎಂದು ಗುರುತಿಸಿಕೊಂಡರು.

Halasree swameeji with puneet kerehalli
ಹಾಲ ಮಠ ಮೂಲ ತತ್ವ ಸಿದ್ಧಾಂತ ಮರೆತು ಹಿಂದುತ್ವದ ಪ್ರತಿಪಾದನೆಯಲ್ಲಿ ಕಳೆದುಹೋದ ಅಭಿನವ ಹಾಲಶ್ರೀಗಳನ್ನು ಅವರ ಚಿಕ್ಕಪ್ಪಂದಿರು ಎಚ್ಚರಿಸಿದ್ದರು. ನಮ್ದು ಜಾತ್ಯತೀತ , ಪಕ್ಷಾತೀತ ಮಠ. ಮಠ ವ್ಯಾಪ್ತಿಯ ಧಾರ್ಮಿಕ ಕಾರ್ಯ ಮಾತ್ರ ನಿಭಾಯಿಸು ಎಂದು ಬುದ್ಧಿವಾದ ಹೇಳಿದ್ದರು.

ಆದರೆ, ಹಾಲಶ್ರೀ ಸ್ವಾಮೀಜಿಗಳು ಹಿಂದುತ್ವದ ಮೂಲಕ ರಾಜಕೀಯ ಪ್ರವೇಶದ ಹಾದಿ ಹುಡುಕುತ್ತಿದ್ದರು. ಪ್ರಬಲ ರಾಜಕೀಯ ನಾಯಕ ಎಂದು ಗುರುತಿಸುವ ಹಂಬಲ ಅವರಿಗಿತ್ತು.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರು ಧಾರ್ಮಿಕತೆ ಮತ್ತು ರಾಜಕೀಯವನ್ನು ಸರಿದೂಗಿಸಿಕೊಂಡು ಹೋಗುತ್ತೇನೆ, ಕರ್ನಾಟಕದ ಯೋಗಿಯಾಗುತ್ತೇನೆ ಎನ್ನುವುದು ಅವರ ಕನಸಾಗಿತ್ತು. ಅದಕ್ಕೆ ಸರಿಯಾಗಿ ಅವರ ಹಿಂದುತ್ವದ ಪ್ರಖರ ಭಾಷಣ, ಗೋಪ್ರೇಮದ ಚಟುವಟಿಕೆಗಳಿಂದಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕರಿಗೆ ಪ್ರಿಯರಾದರು. ಅವರೆಲ್ಲ ಮಠದ ಕಡೆಗೆ ನಡೆದುಬರುವಂತಾಯಿತು.

ಉತ್ತರ ಕರ್ನಾಟಕ, ಅಖಂಡ ಬಳ್ಳಾರಿಗೆ ಬಿಜೆಪಿ ನಾಯಕರು ಭೇಟಿ ನೀಡಿದರೆ ಹಾಲ ಮಠಕ್ಕೂ ಭೇಟಿ ನೀಡುತ್ತಿದ್ದರು. ಹೀಗಾಗಿ ಮಠ ಎನ್ನುವುದು ರಾಜಕೀಯದ ಮನೆ ಎಂಬಂತಾಯಿತು. ಈ ರೀತಿಯ ರಾಜಕೀಯ ಚಟುವಟಿಕೆಗಳು ಶುರುವಾದ ಮೇಲೆ ಸ್ವಾಮೀಜಿಗೆ ಮಠದ ಮೇಲಿನ ಆಸಕ್ತಿಯೂ ಕಡಿಮೆಯಾಯಿತು. ಅವರು ಮಠದಲ್ಲೂ ಸರಿಯಾಗಿ ಉಳಿಯುತ್ತಿರಲಿಲ್ಲ ಎನ್ನಲಾಗಿದೆ.

Halasree swameeji with BSY
ಎಲ್ಲರೂ ನನ್ನ ಮಾತು ಕೇಳುತ್ತಾರೆ ಎಂದು ಅಂದುಕೊಂಡಿದ್ದರು!
ಬಿಎಸ್‌ ಯಡಿಯೂರಪ್ಪ, ಈಶ್ವರಪ್ಪ, ಬೊಮ್ಮಾಯಿ ಮೊದಲಾದ ಟಾಪ್‌ ಲೀಡರ್‌ಗಳು ಮಠಕ್ಕೆ ಬಂದು ತನ್ನ ಜತೆ ರಾಜಕೀಯ ಮತ್ತಿತರ ವಿಚಾರಗಳನ್ನು ಮಾತನಾಡುವಾಗ ತಾನೊಬ್ಬ ರಾಜಕೀಯ ಮುತ್ಸದ್ಧಿಯಾಗುತ್ತಿದ್ದೇನೆ ಎಂಬ ಭ್ರಮೆ ಅವರಿಗೆ ಶುರುವಾಗಿತ್ತು. ಆ ಭಾಗದಲ್ಲಿ ಯಾರಿಗೆ ಟಿಕೆಟ್‌ ಕೊಡಬಹುದು ಎಂದು ಚರ್ಚೆ ಮಾಡಿದರೆ ನಾನೇ ಇಲ್ಲಿ ಟಿಕೆಟ್‌ ಫೈನಲ್‌ ಮಾಡುವವನು ಎಂಬಂತೆ ಅವರು ಅಂದುಕೊಂಡಿದ್ದರು.

ಹೀಗೆ ರಾಜಕೀಯ ಚರ್ಚೆ ನಡೆಯುತ್ತಿದ್ದಾಗ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ ಪ್ರಬಲವಾಗಿರುವ ಒಂದು ಕ್ಷೇತ್ರದಲ್ಲಿ ಅವರು ಕಣಕ್ಕಿಳಿಯಲು ಬಯಸಿದ್ದರು. ಆದರೆ, ಕೊನೆಯ ಹಂತದಲ್ಲಿ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿ ಬರಲಿಲ್ಲ.

ರಾಜಕೀಯ ಪ್ರಭಾವದ ಬಡಾಯಿ
ಬಿಜೆಪಿ ನಾಯಕರ ಜತೆಗೆ ಸಂಪರ್ಕದಿಂದಾಗಿ ಅವರಿಗೆ ಕೆಲವೊಂದು ಆಂತರಂಗಿಕ ವಿಚಾರಗಳು ಗೊತ್ತಾಗುತ್ತಿದ್ದವು ಅನಿಸುತ್ತದೆ. ಅವುಗಳನ್ನು ಬಳಸಿಕೊಂಡು ಕಥೆಗಳನ್ನು ಹೆಣೆಯುತ್ತಿದ್ದರು ಸ್ವಾಮೀಜಿ. ಆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ಕೊಡೋಣ ಎಂದು ಕೇಳಿದರು. ನಾನು ಅವನ ಹೆಸರು ಶಿಫಾರಸು ಮಾಡಿದೆ, ಅಲ್ಲಿ ಹಾಗಾಯಿತು, ಇಲ್ಲಿ ಹೀಗಾಯಿತು ಎಂದು ಕತೆ ಹೇಳುತ್ತಿದ್ದರು. ಇದನ್ನೆಲ್ಲ ಕೇಳಿದವರಿಗೆ ಇವರು ನಿಜಕ್ಕೂ ಮಹಾಪ್ರಭಾವಿ ಎಂದು ಅನಿಸುತ್ತಿತ್ತು.

ಹಾಗೆ ಚುನಾವಣೆಯ ಸಂದರ್ಭದಲ್ಲಿ ಹಲವಾರು ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸ್ವಾಮೀಜಿ ಪ್ರಭಾವ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು.

ಗೋವಿಂದ ಪೂಜಾರಿ ಪ್ರಕರಣದಲ್ಲೂ ಆಗಿದ್ದು ಇದೇ!
ಹಿಂದು ಸಂಘಟನೆಗಳ ನಾಯಕರ ಅತಿ ಪ್ರಿಯ ಸ್ವಾಮೀಜಿ ಹಾಲಶ್ರೀ. ಚೈತ್ರಾ ಕುಂದಾಪುರಳನ್ನು ಆ ಭಾಗಕ್ಕೆ ಕರೆಸಿಕೊಳ್ಳುವುದು, ಆತಿಥ್ಯ ನೀಡುವುದು, ಭಾಷಣ ಮಾಡುವುದು ಮೊದಲಾದ ಕಾಯಕ ಇವರದಾಗಿತ್ತು. ಚಕ್ರವರ್ತಿ ಸೂಲಿಬೆಲೆ, ಪುನೀತ್‌ ಕೆರೆಹಳ್ಳಿಯಂಥ ಸಾಮಾಜಿಕ ಸಂಘಟಕರು, ಹೋರಾಟಗಾರರಿಗೂ ಇದು ಉತ್ತರ ಕರ್ನಾಟಕದ ಪೀಠ.

ಹಾಗೆ ಬಂದಾಗಲೆಲ್ಲ ಸ್ವಾಮೀಜಿ ಹೇಳುವ ವಿಚಾರಗಳು, ಅಲ್ಲಿ ಭೇಟಿ ನೀಡುವವರ ಕಥೆಗಳು ಇವರು ಬಿಜೆಪಿಯಲ್ಲೂ ಪ್ರಭಾವಿಗಳು ಎಂಬಂತೆ ಭಾಸಗೊಳಿಸುತ್ತಿದ್ದವು ಅನಿಸುತ್ತದೆ. ಹೀಗಾಗಿ ಗೋವಿಂದ ಪೂಜಾರಿ ಅವರು ಟಿಕೆಟ್‌ನ ಬಗ್ಗೆ ಮಾತನಾಡಿದಾಗ ಚೈತ್ರಾ ಕುಂದಾಪುರಗೆ ಮೊದಲು ನೆನಪಾದದ್ದು ಹಾಲಶ್ರೀ. ಅವರನ್ನು ಹಾಲ ಮಠಕ್ಕೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದು ಕೂಡಾ ಅಲ್ಲೇ. ಮುಂದೆ ಹಲವು ಬಾರಿ ಭೇಟಿಯಾದಾಗ ಬಹುಶಃ ಗೋವಿಂದ ಪೂಜಾರಿಗೂ ಈ ಸ್ವಾಮಿ ಪವರ್‌ಫುಲ್‌ ಅನಿಸಿರಬಹುದು.

Govinda poojari and Chaitra at hala matt
ಹೀಗಾಗಿಯೇ ಹೆಸರು ಶಿಫಾರಸು ಮಾಡಲು 1.5 ಕೋಟಿ ರೂ. ಕೊಡಬೇಕಾಗುತ್ತದೆ ಎಂಬ ಬೇಡಿಕೆ ಇಟ್ಟಿದ್ದು. ಹಾಲಶ್ರೀ ಅವರು ಈ ವಿಚಾರದ ಬಗ್ಗೆ ಬಿಜೆಪಿ ನಾಯಕರ ಜತೆ ಗೋವಿಂದ ಪೂಜಾರಿಯನ್ನು ಭೇಟಿ ಮಾಡಿಸಿದ್ದರ ಚಿತ್ರಗಳೂ ಓಡಾಡುತ್ತಿವೆ. ಇತ್ತ ಗೋವಿಂದ ಪೂಜಾರಿ ತನಗೆ ಸ್ವಾಮೀಜಿ ಹೇಳಿದರೆ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆ ಇತ್ತು. ನಾನು ಹೇಳಿದರೆ ಕೊಡದಿರುವುದಿಲ್ಲ ಎಂಬ ಅತಿಯಾದ ನಂಬಿಕೆ ಹಾಲಶ್ರೀಗಳಿಗೂ ಇತ್ತು. ಆದರೆ, ಬಿಜೆಪಿ ಟಿಕೆಟ್‌ ಎನ್ನುವುದು ಯಾರ ಕೈಯಲ್ಲೂ ಇರುವುದಿಲ್ಲ ಎಂಬ ಸಿ.ಟಿ. ರವಿ ಮಾತೇ ನಿಜವಾಗಿ ಹೋಯಿತು. ಹೀಗಾಗಿ ಗೋವಿಂದ ಪೂಜಾರಿಗೆ ಟಿಕೆಟ್‌ ಸಿಗಲಿಲ್ಲ.
ಆದರೆ ರಾಜಕೀಯದಲ್ಲಿ ಕೊಟ್ಟ ಹಣ ಮರಳಿ ಬರುವುದಿಲ್ಲ ಎಂದು ಹಾಲಶ್ರೀ ತಿಳಿದಿದ್ದರು. ಇತ್ತ ಗೋವಿಂದ ಪೂಜಾರಿ ಬೆಂಬಿಡದ ಬೇತಾಳವಾದರು. ಅಷ್ಟು ಹೊತ್ತಿಗೆ ಹಣವನ್ನೆಲ್ಲ ಭೂಮಿ, ಪೆಟ್ರೋಲ್‌ ಪಂಪ್‌, ಕಾರು ಅಂತ ಖರ್ಚು ಮಾಡಿದ್ದರು. ಕೆಲವೆಡೆ ಹೂಡಿಕೆ ಮಾಡಿದ್ದರು. ಗೋವಿಂದ ಪೂಜಾರಿ ಕೇಳುವಾಗ ಎಲ್ಲ ಹಣ ಖಾಲಿಯಾಗಿತ್ತು.

Hala Sree swameeji petrol pump
ಪೆಟ್ರೋಲ್‌ ಪಂಪ್‌
ಅಷ್ಟಾದರೂ ಅವರಿವರಲ್ಲಿ ಕೇಳಿ ಐವತ್ತು ಲಕ್ಷ ರೂ. ಮರಳಿಸಿದ್ದಾರೆ ಎನ್ನಲಾಗಿದೆ. ಉಳಿದ ಹಣವನ್ನೂ ಕೊಡುತ್ತೇನೆ ಎನ್ನುವ ಭರವಸೆ ನೀಡಿದ್ದರು ಸ್ವಾಮೀಜಿ. ಆದರೆ, ನಂಬುವ ಸ್ಥಿತಿಯಲ್ಲಿ ಗೋವಿಂದ ಪೂಜಾರಿ ಇರಲಿಲ್ಲ. ಅಚ್ಚರಿ ಎಂದರೆ ಆಗ ಯಾವ ದೊಡ್ಡ ದೊಡ್ಡ ನಾಯಕರೂ ಸ್ವಾಮೀಜಿಯ ಬೆಂಬಲಕ್ಕೆ ಬರಲಿಲ್ಲ.

Goovinda Poojari and chaitra kundapura
ಅಂತಿಮವಾಗಿ ಒಂಟಿಯಾಗಿ ಮಠ ತೊರೆದು ಹೋಗುವ ಸನ್ನಿವೇಶ, ದೂರದ ಕಟಕ್‌ನ ರೈಲು ನಿಲ್ದಾಣದಲ್ಲಿ ಕಾವಿ ಕಳಚಿ ಸಾಮಾನ್ಯ ವ್ಯಕ್ತಿಯಾಗುವ ಸನ್ನಿವೇಶ ನಿರ್ಮಾಣವಾಗಿದೆ.ಅವರು ಮತ್ತೆ ಬೆಂಗಳೂರಿಗೆ ಬರುತ್ತಾರೆ, ಪ್ರಕರಣದ ತನಿಖೆ ಎದುರಿಸುತ್ತಾರೆ. ಮಠಕ್ಕೆ ಮರಳುತ್ತಾರಾ? ಕಳಚಿದ ಕಾವಿಯನ್ನು ಮತ್ತೆ ತೊಡುತ್ತಾರಾ? ಕಾಲವೇ ಉತ್ತರ ಹೇಳಬೇಕು.