ಶೃಂಗೇರಿ: ಮಳೆಯ ಕಣ್ಣಾಮುಚ್ಚಾಲೆಯ ನಡುವೆಯೂ ಕಷ್ಟುಪಟ್ಟು ಬೆಳೆದ ಭತ್ತದ ಬೆಳೆ ಕಾಡುಪ್ರಾಣಿಗಳ ಉಪಟಳದಿಂದ ಮಣ್ಣು ಪಾಲಾಗುತ್ತಿದ್ದು ರೈತರು ಬರದ ಜೊತೆಗೆ ನಷ್ಟದ ಹೊರೆ ಯನ್ನೂ ಹೊರುವಂತಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಳೆ ಕೊರತೆ ಸೇರಿ ಈ ಬಾರಿ ಆರಂಭದಿಂದಲೂ ಭತ್ತದ ಕೃಷಿಗೆ ಎದುರಾದ ಸಂಕಷ್ಟಗಳು ಒಂದೆರಡಲ್ಲ, ದಾಟಿ ಮೇಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿದ್ದು, ಕೊಯ್ದು ಕಾಲದಲ್ಲಿ ಕಾಟಿ, ಹಂದಿ ಕಾಟ ವಿಪರೀತವಾಗಿರುವುದರಿಂದ ಫಸಲು, ಭತ್ತದ ಹುಲ್ಲು ಹಾಳಾಗುತ್ತಿದೆ. ಇಷ್ಟು ವರ್ಷ ಭತ್ತಕ್ಕೆ ಮಂಗ ಮತ್ತು ಹಂದಿ ಕಾಟ ಇತ್ತಾದರೂ ಈ ಬಾರಿ ಕಾಟಿ ಉಪಟಳ ತೀವ್ರವಾಗಿದ್ದು, 6-7 ಕಾಟಿಗಳು ಗುಂಪು ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು, ಸಮೀಪದ ಹನಕೋಡು, ಕೆಂಜಿಗೆರೆ, ಕೆರೆಮನೆ, ಶೆಟ್ಟಿಹಳ್ಳಿ ಪ್ರದೇಶದಲ್ಲಿ ತೋಟ ಮತ್ತು ಭತ್ತದ ಗದ್ದೆಗೆ ನುಗ್ಗಿ ಬೆಳೆ, ಗಿಡವನ್ನು ನಾಶಪಡಿಸುತ್ತಿವೆ.
ಅಲ್ಲದೆ ಗದ್ದೆಯಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವುದರಿಂದ ಪೈರು ಮಣ್ಣಿನಡಿ ಸಿಲುಕಿದ್ದು ಹುಲ್ಲು ಮತ್ತು ಭತ್ತ ಎರಡು ನಷ್ಟವಾಗಿದ್ದು, ಚೌಗು ಪ್ರದೇಶದಲ್ಲಿ ಒಮ್ಮೆಲೆ ಸಂಚರಿಸಿದಾಗ ಹೊಂಡ ನಿರ್ಮಾಣವಾಗುತ್ತಿದೆ.ಮೊದಲ ಬಾರಿ ಕಾಟಿಗಳ ಉಪಟಳ ಆರಂಭವಾಗಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ.ಭತ್ತದ ಗದ್ದೆಗಳಲ್ಲಿ ಮಾತ್ರವಲ್ಲದೆ ಕಾಟಿಗಳು ತೋಟದಲ್ಲೂ ದಾಂಧಲೆ ನಡೆಸಿದ್ದು, ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಸಸಿಗೆ ಹಾನಿ ಮಾಡುತ್ತಿವೆ. ಬೇಲಿ, ಕಾಲುವೆ ಯಾವುದನ್ನು ಲೆಕ್ಕಿಸದೆ ಸ್ವಚ್ಛಂದವಾಗಿ ತಿರುಗಾಡುತ್ತಿದ್ದು, ತೋಟದಲ್ಲಿ ಕಾಟಗಳು ಸುತ್ತಾಡಿ ಕಾಫಿ ಗಿಡಗಳನ್ನು ಮುರಿದು ಹಾಕುತ್ತಿದೆ.