ಹುನಗುಂದ: ನನ್ನ ಮಂತ್ರಿ ಮಾಡಿದ್ದಾರೆ ಈಗೇನು ಮಾಡ್ತೀರಾ ಜಗದ್ಗುರು ಎಂದು ನೂತನ ಸಚಿವ ವಿಜಯಾನಂದ ಕಾಶಪ್ಪನವರ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಜೀ ವಿರುದ್ಧ ಮತ್ತೇ ಹರಿಹಾಯ್ದಿದ್ದಾರೆ.
ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಗುರುವಾರ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿ ಅವರು, ಜಗದ್ಗುರುಗಳು.. ಜಗದ್ಗುರುಗಳು.. ನನ್ನನ್ನು ಮಂತ್ರಿ ಮಾಡಬಾರದೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಂದೆ ಹೇಳಿದ್ದೀರಂತೆ ಅವರು ನನಗೆ ಪಂಚಮಸಾಲಿ ಶ್ರೀಗಳು ನಿನ್ನನ್ನು ಮಂತ್ರಿ ಮಾಡಬಾರದೆಂದು ಹೇಳುತ್ತಿದ್ದಾರೆ. ಅವರು ಮಾಡಬಾರದು ಅಂದಿದ್ದಕ್ಕೆ ನಿನ್ನನ್ನು ಮಂತ್ರಿ ಮಾಡುತ್ತಿದ್ದೇನೆಂದು ನನ್ನನ್ನು ಮಂತ್ರಿ ಮಾಡಿದ್ದಾರೆ. ಸಚಿವನಾಗಿದ್ದೇನೆ ಈಗೇನ ಮಾಡುತ್ತಿಯಪ್ಪಾ ಜಗದ್ಗುರು…? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಇರುವವರೆಗೂ ಯಾವುದೇ ಮುಖ್ಯಮಂತ್ರಿ ಮನೆಗೆ ಹೋಗುವುದಿಲ್ಲ ಅಂತ ಪ್ರಮಾಣ ಮಾಡಿದೆಲ್ಲಪ್ಪಾ…? ನಿನ್ನ ನೈತಿಕ ಮಟ್ಟ ಏನಿದೆ. ನೀವು ಹಾಕಿಕೊಂಡ ಬಟ್ಟೆಗೆ ವಿಧಿಯರಾಗಿ ಇರಬೇಕು. ಆದರೆ ನೀನು ಹಾಕಿಕೊಂಡ ಬಟ್ಟೆಗೆ ವಿಧೇಯರಾಗಿದ್ದೀಯಾ..? ಸಮಾಜ ನಮಗೆ ಕೊಟ್ಟ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ವಿನಃ ನಂದು ನಡಿತೈತಿ ಅಂತ ಏನೇನರ ಮಾತಾಡಿದರೇ ಏನು ನಡಿತೈತಿ. ಕೊಲ್ಲೊರು ನೂರಾರು ಜನ ಇದ್ರೆ ಕಾಯೋ ಒಬ್ಬ ಇರತ್ತಾನೆ ಎಂದು ಮತ್ತೆ ಲಿಂಗಾಯತ ಪಂಚಮಸಾಲಿ ಶ್ರೀಗಳ ವಿರುದ್ಧ ಸಚಿವರು ಏಕವಚನದಲ್ಲಿಯೇ ಹರಿಹಾಯ್ದರು.



