ಸುದೀರ್ಘ ಅಂತರದ ಬಳಿಕ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಫೆಬ್ರವರಿ 15ರಂದು ಪಂದ್ಯ ಆರಂಭವಾಗಲಿದೆ.
ರೋಹಿತ್ ಶರ್ಮಾ ಬಳಗವು ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 106 ರನ್‌ಗಳಿಂದ ಗೆದ್ದು ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಸದ್ಯ ಮೂರನೇ ಪಂದ್ಯದಲ್ಲೂ ಗೆಲುವಿನ ಭರವಸೆ ತಂಡಕ್ಕಿದೆ. ಇದರ ನಡುವೆ ಅನುಭವಿ ಆಟಗಾರರ ಅನುಪಸ್ಥಿತಿ ತಂಡವನ್ನು ಕಾಡಲಿದೆ.
ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ, ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಟೀಮ್ ಇಂಡಿಯಾಗೆ ಭಾರಿ ಹೊಡೆತ ನೀಡಿದೆ. ಇದರೊಂದಿಗೆ, ಅಯ್ಯರ್ ಕೂಡಾ ಅಧಿಕೃತವಾಗಿ ತಂಡದಿಂದ ಹೊರಹೋಗಿದ್ದಾರೆ.
ಅತ್ತ ರವೀಂದ್ರ ಜಡೇಜಾ ಫಿಟ್‌ನೆಸ್ ಕುರಿತು ಇನ್ನೂ ಸ್ಪಷ್ಟನೆ ಇಲ್ಲ. ಹೀಗಾಗಿ ಮೂರನೇ ಪಂದ್ಯದಲ್ಲಿ ಭಾರತ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆಯಾಗುವುದು ಖಚಿತವಾಗಿದೆ. ಈ ನಡುವೆ ಇಬ್ಬರು ಯುವ ಆಟಗಾರರು ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.