ಬೆಂಗಳೂರು: ಡೈರಿಸರ್ಕಲ್ ಬಳಿ ಹಾಡಹಗಲೇ ನಡೆದಿದ್ದ ರಾಬರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಕೊನೆಗೂ ಈ ಗ್ಯಾಂಗ್‌ನ ಪ್ರಮುಖ ಆರೋಪಿಗಳು ಪತ್ತೆಯಾಗಿದ್ದಾರೆ. ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೋಟಿ ಕೋಟಿ ಹಣ ಕೂಡ ಪತ್ತೆ ಹಚ್ಚಿದ್ದಾರೆ. ಈವರೆಗೂ ಸುಮಾರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 5.56 ಕೋಟಿ ಪತ್ತೆಯಾಗಿದೆ.
ಬೆಂಗಳೂರು ಹೊರವಲಯದ ಹೊಸಕೋಟೆ ಬಳಿಯ ಒಂದು ಪಾಳುಬಿದ್ದ ಮನೆಯಲ್ಲಿ ಗ್ಯಾಂಗ್ ಗುಟ್ಟಾಗಿ ₹5.56 ಕೋಟಿ ಹಣವನ್ನು ಸಂಗ್ರಹಿಸಿಟ್ಟಿದ್ದರು. ಹೀಗೆ ಹಣ ಸಂಗ್ರಹಿಸಿಟ್ಟಿದ್ದು ರಹಸ್ಯ ಪೊಲೀಸರಿಂದ ಬಯಲಾಗಿದೆ. ಶುಕ್ರವಾರ ಮಧ್ಯರಾತ್ರಿ ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಮತ್ತು ಹೊಸಕೋಟೆ ರೂರಲ್ ಪೊಲೀಸ್ ತಂಡಕ್ಕೆ ದೊರೆತ ಒಂದು ಸಣ್ಣ ಕ್ಲೂ ಆಧರಿಸಿ ಆ ಪಾಳು ಮನೆಯ ಬಳಿ ತಲುಪಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಬಾಗಿಲು ಲಾಕ್ ಆಗಿತ್ತು. ಅನುಮಾನ ಹೆಚ್ಚಾಗಿದ್ದರಂದ ತಕ್ಷಣ ಬಾಗಿಲು ಒಡೆದು ಒಳಗೆ ನುಗ್ಗಿದ ಪೊಲೀಸರು ಕೋಣೆಯೊಂದರಲ್ಲಿ ದೊಡ್ಡ ದೊಡ್ಡ ಸೂಟ್ಕೇಸ್ಗಳು, ಗೋಣಿಚೀಲಗಳನ್ನು ಕಂಡುಕೊಂಡಿದ್ದಾರೆ.
ಪೊಲೀಸರ ಕಣ್ಣಿಗೆ ಬಿದ್ದಿದ್ದು ಕೋಟಿ ಕೋಟಿ ರೂಪಾಯಿ ನೋಟಿನ ಬಂಡಲ್!
ಚೀಲಗಳು ತೆಗೆದ ತಕ್ಷಣ ಪೊಲೀಸರ ಕಣ್ಣಿಗೆ ಬಿದ್ದಿದ್ದು ಕೋಟಿ ಕೋಟಿ ರೂಪಾಯಿಗಳ ನೋಟುಗಳ ಬಂಡಲ್ಗಳು. ತಕ್ಷಣ ಇದನ್ನು ವಶ ಪಡೆಸಿಕೊಂಡ ಪೊಲೀಸರು ಸ್ಥಳದಲ್ಲೇ ನಿಟ್ಟುಸಿರು ಬಿಟ್ಟರು. ತಕ್ಷಣ ಪೊಲೀಸರು ಸಿ.ಸಿ.ಬಿ. ಜಂಟಿ ಆಯುಕ್ತರಿಗೆ, ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಮತ್ತು ಪೊಲೀಸ್ ಆಯುಕ್ತ ಕಚೇರಿಗೆ ಮಾಹಿತಿ ರವಾನಿಸಿದರು. ಮಧ್ಯರಾತ್ರಿಯೇ ಹೆಚ್ಚುವರಿ ತಂಡಗಳು ಆಗಮಿಸಿ ಹಣವನ್ನು ಎಣಿಕೆ ಮಾಡಿ ವಶಪಡಿಸಿಕೊಂಡವು. ಒಂದೇ ಬಾರಿಗೆ ದೊಡ್ಡ ಕಾರ್ಯಾಚರಣೆಯಲ್ಲಿ ಈ ಪ್ರಕರಣದಲ್ಲಿ ಒಟ್ಟು ರಿಕವರಿ ಆದ ಹಣ ₹5. 76 ಕೋಟಿಗೆ ತಲುಪಿದೆ. ಉಳಿದ ₹1.35 ಕೋಟಿ ಇನ್ನೂ ಪತ್ತೆಯಾಗಬೇಕಿದೆ.
ತನಿಖೆಯಲ್ಲಿ ತಿಳಿದುಬಂದಂತೆ, ದರೋಡೆಯಾದ ದೊಡ್ಡ ಮೊತ್ತವನ್ನು ತಕ್ಷಣ ತವರು ಊರುಗಳಿಗೆ ಒಯ್ಯುವುದು ರಿಸ್ಕ್ ಎಂದು ಭಾವಿಸಿದ ಗ್ಯಾಂಗ್ ಈ ಪಾಳುಬಿದ್ದ ಮನೆಯನ್ನೇ ತಾತ್ಕಾಲಿಕ ಠೇವಣಿ ಕೊಠಡಿಯಾಗಿ ಬಳಸಿಕೊಂಡಿತ್ತು. ಈ ಮನೆ ಗ್ಯಾಂಗ್‌ನ ಒಬ್ಬ ಸದಸ್ಯನ ಸಂಬಂಧಿಕರಿಗೆ ಸೇರಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಯಾರೂ ವಾಸಿಸದ ಮನೆ ಎಂಬ ಕಾರಣಕ್ಕೆ ಇದು ಸುರಕ್ಷಿತ ಎಂದು ಭಾವಿಸಿದ್ದರು. ಆದರೆ ಪೊಲೀಸರ ತಾಂತ್ರಿಕ ತನಿಖೆ, ಗುಪ್ತಚರ ಮಾಹಿತಿ ಮತ್ತು ಬಂಧಿತ ಆರೋಪಿಗಳ ವಿಚಾರಣೆಯಿಂದ ಈ ಸ್ಥಳ ಪತ್ತೆಯಾಗಿದೆ.