LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!

ಬೆಂಗಳೂರು (ಡಿ.03): ಬೆಂಗಳೂರು-ಹಾಸನ-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಹಾಸನ-ಮಂಗಳೂರು ನಡುವೆ ಸ್ವಲ್ಪ ಸವಾಲಿದೆ. ಇಲ್ಲಿ ರಸ್ತೆ ಮತ್ತು ರೈಲು ಎರಡನ್ನೂ ಸಮಾನಾಂತರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಖನಿಜ ಭವನದಲ್ಲಿ ರಾಜ್ಯದ ವಿವಿಧ ವೆಚ್ಚ ಹಂಚಿಕೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳೊಂದಿಗೆ ಮಹತ್ತ್ವದ ಅನುಸರಣ ಸಭೆ (ಫಾಲೋಅಪ್ ಮೀಟಿಂಗ್) ನಡೆಸಿದರು.

ಬಳಿಕ ಮಾತನಾಡಿದ ಅವರು, 'ವಿಜಯಪುರ-ಬೆಂಗಳೂರು ನಡುವೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ ಬೇಕಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ಪ್ರಯತ್ನಗಳು ನಡೆಯುತ್ತಿದ್ದು, ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಈಗ ರೈಲ್ವೇ ಅಧಿಕಾರಿಗಳು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಲು ಅಭ್ಯಂತರವಿಲ್ಲ ಎಂದಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ಅಲ್ಲಿಂದ ಮುಂದಕ್ಕೆ ವಿಜಯಪುರದವರೆಗೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರೈಲು ಸೇವೆ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ಆಗಲಿದೆ ಎಂಬುದನ್ನು ರೈಲ್ವೆ ಅಧಿಕಾರಿಗಳಿಗೆ ಸಚಿವರು ಮನದಟ್ಟು ಮಾಡಿದರು.

ಹುಬ್ಬಳ್ಳಿ ಹಾಗೂ ಗದಗ ಬೈಪಾಸ್ ಮಾರ್ಗಗಳಲ್ಲಿ ರೈಲು

ಪ್ರಸ್ತುತ ಬೆಂಗಳೂರು- ವಿಜಯಪುರ ರೈಲು ಹುಬ್ಬಳ್ಳಿ ಮತ್ತು ಗದಗ ರೈಲು ನಿಲ್ದಾಣಗಳಲ್ಲಿ ಎಂಜಿನ್ ಬದಲಿಸಿಕೊಂಡು ಚಲಿಸಬೇಕಾಗಿದೆ. ಇದರಿಂದ ಪ್ರಯಾಣ ಅವಧಿ ಜಾಸ್ತಿ ಆಗುತ್ತಿದೆ. ಹೀಗಾಗಿ ಈ ಎರಡೂ ಬೈಪಾಸ್ ಗಳ ಮೂಲಕ ರೈಲು ಓಡಿಸುವಂತಾದರೆ ಪ್ರಯಾಣ ಅವಧಿ ಕಡಿಮೆ ಆಗಲಿದೆ. ಬೆಂಗಳೂರು ಮತ್ತು ದೂರದ ವಿಜಯಪುರ ನಡುವೆ ಹುಬ್ಬಳ್ಳಿ ಹಾಗೂ ಗದಗ ಬೈಪಾಸ್ ಮಾರ್ಗಗಳಲ್ಲಿ ರೈಲು ಓಡಿಸಲು ಯಾವುದೇ ತೊಂದರೆ ಇಲ್ಲ. ಆದರೆ, ಈಗ ಚಾಲ್ತಿಯಲ್ಲಿರುವ ರೈಲುಗಳ ಮಾರ್ಗವನ್ನು ಬದಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈಲ್ವೇ ಮಂಡಳಿಯಿಂದ ಹೊಸ ರೈಲುಗಳನ್ನು ಮಂಜೂರು ಮಾಡಿಸಿಕೊಳ್ಳಬೇಕು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧವಾಗಿ ಅವರ ಜೊತೆಗೆ ನಮ್ಮ ಕಡೆಯಿಂದಲೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ತಕ್ಷಣವೇ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಈ ಮಾರ್ಗದ ವಂಡಾಲ ಮತ್ತು ಆಲಮಟ್ಟಿ ನಡುವೆ ಜೋಡಿ ಹಳಿ ಕಾಮಗಾರಿ ಮಾತ್ರ ಬಾಕಿ ಇದೆ. ಇದು 2026ರ ಫೆಬ್ರವರಿಯಲ್ಲಿ ಮುಗಿಯಲಿದೆ. ಈ ಭಾಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಅರ್ಧ ಕಿ.ಮೀ. ಉದ್ದದ ಬೃಹತ್ ಉಕ್ಕು ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ವಿದ್ಯುದ್ದೀಕರಣದ ಜೋಡಿ ಮಾರ್ಗದ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಆ ಬಳಿಕ ಹಾಲಿ ರೈಲುಗಳ ವೇಗ ಕೂಡ ಹೆಚ್ಚಾಗಲಿದೆ. ಜತೆಗೆ ಹೊಸ ರೈಲುಗಳಿಗೂ ಬೇಡಿಕೆ ಸಲ್ಲಿಸಲಾಗುವುದು. ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕೆಂದೂ ನಾವು ಆಗ್ರಹಿಸುತ್ತಿದ್ದೇವೆ. ಆದರೆ ಅದು ಕಾರ್ಯಸಾಧುವಲ್ಲ, ಬದಲಿಗೆ ವಂದೇ ಭಾರತ್ ಸ್ಪೀಪರ್ ಕೋಚ್ ಸೇವೆ ಆರಂಭಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ‌. ಆ ಪ್ರಕಾರ ಇಬ್ಬರೂ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗುವುದು. ಸೋಮಣ್ಣ ಅವರ ಜತೆಗೂ ಸಭೆ ಮಾಡಿ ಮನವಿ ಕೂಡ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ತುಮಕೂರು-ಊರುಕೆರೆ ರೈಲು ಆರಂಭ

ತುಮಕೂರು-ರಾಯದುರ್ಗ ನಡುವೆ ರೈಲು ಹಳಿ ಜೋಡಣೆ ನಡೆಯುತ್ತಿದೆ. ಇಲ್ಲಿ ತುಮಕೂರು-ಊರುಕೆರೆ ಮತ್ತು ದೊಡ್ಡಹಳ್ಳಿ-ಪಾವಗಡ ನಡುವೆ ಈ ವರ್ಷ 27 ಕಿ.ಮೀ. ಕಾಮಗಾರಿ ಮುಗಿಯಲಿದೆ. ತುಮಕೂರು-ಊರುಕೆರೆ ನಡುವೆ (10 ಕಿ.ಮೀ) ನೂರಾರು ಕೈಗಾರಿಕೆಗಳಿದ್ದು, ದಿನವೂ ಸಾವಿರಾರು ಜನ ಇಲ್ಲಿ ಓಡಾಡುತ್ತಾರೆ. ಇನ್ನೊಂದು ಬದಿಯಲ್ಲಿ ದೊಡ್ಡಹಳ್ಳಿ-ಪಾವಗಡ ನಡುವೆಯೂ (20 ಕಿ.ಮೀ) 2026ರ ಜನವರಿಯಿಂದ ರೈಲು ಓಡಿಸಲಾಗುವುದು. ಮಡಕಶಿರಾ-ಪಾವಗಡ ನಡುವಿನ ಕಾಮಗಾರಿ 2026ರ ಡಿಸೆಂಬರ್ ಹೊತ್ತಿಗೆ, ಮಧುಗಿರಿ-ಪಾವಗಡ ಮಧ್ಯದ ಹಳಿ ಜೋಡಣೆ 2028ರ ಫೆಬ್ರವರಿ ವೇಳೆಗೆ ಮುಗಿಯಲಿದೆ ಎಂದು ಅವರು ನುಡಿದಿದ್ದಾರೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ಊರುಕೆರೆ-ತಿಮ್ಮರಾಯನಹಳ್ಳಿ ನಡುವೆ 13 ಕಿ.ಮೀ. ಹಳಿ ಜೋಡಣೆ ಈ ತಿಂಗಳೇ ಮುಗಿಯಲಿದೆ. ಭರಮಸಾಗರ-ಹೆಬ್ಬಾಳು, ಹೆಬ್ಬಾಳು-ತೋಳಹುಣಸೆ ನಡುವೆ 2026ರ ಫೆಬ್ರವರಿ ಕೊನೆಯ ವೇಳೆಗೆ ಹಳಿ ಜೋಡಣೆ ಆಗಲಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ಈಗ ಜೋಡಿ ಹಳಿ ಇದೆ. ಇದನ್ನು ನಾಲ್ಕು ಹಳಿಗಳ ಮಾರ್ಗವಾಗಿ ಮಾಡುವ ಬಗ್ಗೆ ಕಾರ್ಯಸಾಧ್ಯತಾ ವರದಿ ನೀಡುವಂತೆ ಹೇಳಲಾಗಿತ್ತು. ಈ ಸಂಬಂಧದ ವರದಿಗಳು ಕ್ರಮವಾಗಿ ಈ ತಿಂಗಳ 25ರಂದು ಮತ್ತು 2026ರ ಮೇ ತಿಂಗಳಲ್ಲಿ ಕೈ ಸೇರಲಿವೆ. ಪ್ರಾಥಮಿಕ ಮೂಲಗಳ ಪ್ರಕಾರ, ಈ ಚತುಷ್ಪಥ ಮಾರ್ಗ ಲಾಭದಾಯಕವಾಗಲಿದ್ದು, ಇದರಿಂದ ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಎಂ ಬಿ ಪಾಟೀಲ ತಿಳಿಸಿದ್ದಾರೆ.

ಬೆಂಗಳೂರು-ಹಾಸನ-ಮಂಗಳೂರು ದ್ವಿಪಥ

ಸಭೆಯಲ್ಲಿ ಬೆಂಗಳೂರು-ಹಾಸನ-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಹಾಸನ-ಮಂಗಳೂರು ನಡುವೆ ಸ್ವಲ್ಪ ಸವಾಲಿದೆ. ಇಲ್ಲಿ ರಸ್ತೆ ಮತ್ತು ರೈಲು ಎರಡನ್ನೂ ಸಮಾನಾಂತರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಚಿತ್ರದುರ್ಗ-ಆಲಮಟ್ಟಿ ಹಾಗೂ ಯಾದಗಿರಿ-ಆಲಮಟ್ಟಿ ಹೊಸ ಮಾರ್ಗ, ಕೂಡ್ಗಿ ಮಾರ್ಗಗಳ ಯೋಜನಾ ಪ್ರಗತಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಕರಾವಳಿಗೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ- ಅಂಕೋಲಾ ಯೋಜನೆಯಿಂದ ವನ್ಯಜೀವಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಡೆಹ್ರಾಡೂನ್ ನ ವನ್ಯಜೀವಿ ಸಂಸ್ಥೆ ಅಧ್ಯಯನ ನಡೆಸುತ್ತಿದ್ದು, 2026ರ ಜೂನ್ ಗೆ ವರದಿ ಬರಲಿದೆ. ಅದರ ಬಳಿಕ ಯೋಜನೆ ಆರಂಭವಾಗುವ ವಿಶ್ವಾಸ ಇದೆ. ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎನ್.ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಸಿಂಗ್ ಉಪಸ್ಥಿತರಿದ್ದರು. ನೈರುತ್ಯ ರೈಲ್ವೆ ಉಪ ಮುಖ್ಯ ಎಂಜಿನಿಯರ್ ಶಾಸ್ತ್ರಿ ಅವರು ವಿಡಿಯೊ ಸಂವಾದದ ಮೂಲಕ ಭಾಗವಹಿಸಿದ್ದರು.

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ