ಗುವಾಹಟಿ(ಅಸ್ಸಾಂ): ಇಲ್ಲಿನ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ 408 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಟೀಂ ಇಂಡಿಯಾ ತವರಿನಲ್ಲಿ ಮತ್ತೊಮ್ಮೆ ವೈಟ್ವಾಶ್ ಮುಖಭಂಗ ಅನುಭವಿಸಿದೆ.
ಹರಿಣಗಳು ನೀಡಿದ 543 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, 4ನೇ ದಿನದಾಂತ್ಯಕ್ಕೆ 2 ವಿಕೆಟ್ಗೆ 27 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರೆಸಿದ ಪಂತ್ ಪಡೆಯು ತನ್ನ ನೀರಸ ಆಟ ಮುಂದುವರೆಸಿತು. ನೈಟ್ ವಾಚ್ಮನ್ ಕುಲದೀಪ್ ಯಾದವ್ 5 ರನ್ಗೆ ಔಟಾಗುವ ಮೂಲಕ ಭಾರತದ ಕುಸಿತ ಆರಂಭವಾಯಿತು.
ಬಳಿಕ ಕ್ರೀಸ್ಗೆ ಬಂದ ಧ್ರುವ ಜುರೆಲ್ ಮತ್ತೊಮ್ಮೆ ವೈಫಲ್ಯಗೊಂಡು ಕೇವಲ 2 ರನ್ಗೆ ಪೆವಿಲಿಯನ್ಗೆ ಮರಳಿದರು. ನಂತರ ನಾಯಕ ರಿಷಭ್ ಪಂತ್ 13, ಸಾಯಿ ಸುದರ್ಶನ್ 14, ವಾಷಿಂಗ್ಟನ್ ಸುಂದರ್ 16 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಅಲ್ಲದೇ, ನಿತೀಶ್ ಕುಮಾರ್ ರೆಡ್ಡಿ ಶೂನ್ಯ ಸುತ್ತಿದರೆ, ರವೀಂದ್ರ ಜಡೇಜಾ ಅರ್ಧಶತಕ (54) ಗಳಿಸಿ ಕೊಂಚ ಹೋರಾಟ ಪ್ರದರ್ಶಿಸಿದರು. ಸಿರಾಜ್(0) ಅವರ ಕ್ಯಾಚ್ನ್ನು ಮಾಕ್ರೋ ಜಾನ್ಸೆನ್ ಅದ್ಭುತವಾಗಿ ಹಿಡಿಯುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಐತಿಹಾಸಿಕ ಟೆಸ್ಟ್ ಸರಣಿ ಜಯದ ನಗೆ ಬೀರಿತು. ಹರಿಣಗಳ ಪರ ಸಿನೊನ್ ಹಾರ್ಮರ್ 6 ಹಾಗೂ ಕೇಶವ್ ಮಹಾರಾಜ್ 2 ವಿಕೆಟ್ ಪಡೆದು ಭಾರತದ ಕುಸಿತಕ್ಕೆ ಕಾರಣರಾದರು.
ಮೊದಲ ಇನ್ನಿಂಗ್ಸ್ ಹೀಗಿತ್ತು: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 151.1 ಓವರ್‌ಗಳಲ್ಲಿ 10 ವಿಕೆಟ್‌ಗಳ ನಷ್ಟಕ್ಕೆ 489 ರನ್ ಪೇರಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 83.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ, ದಕ್ಷಿಣ ಆಫ್ರಿಕಾ ಭಾರತದ ಮೇಲೆ 288 ರನ್‌ಗಳ ಮುನ್ನಡೆ ಪಡೆದಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಯಶಸ್ವಿ ಜೈಸ್ವಾಲ್ (58) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಾಷಿಂಗ್ಟನ್ ಸುಂದರ್ 48 ರನ್ ಗಳಿಸಿದ್ದರು.
25 ವರ್ಷಗಳ ಬಳಿಕ ಹರಿಣಗಳಿಗೆ ಒಲಿದ ಟೆಸ್ಟ್ ಸರಣಿ: ಭಾರತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆದ್ದು 25 ವರ್ಷಗಳಾಗಿತ್ತು. 2000ರಲ್ಲಿ ಹ್ಯಾನ್ಸಿ ಕ್ರೋನಿಯೆ ನೇತೃತ್ವದ ತಂಡವು ಭಾರತವನ್ನು ಸೋಲಿಸಿತ್ತು. ಬಳಿಕ ಯಾವುದೇ ನಾಯಕರಿಂದಲೂ ಭಾರತವನ್ನು ತವರಿನಲ್ಲಿ ಮಣಿಸಲು ಸಾಧ್ಯವಾಗಿರಲಿಲ್ಲ. ಇದೀಗ, ಟೆಂಬಾ ಬವುಮಾ ಈ ಸಾಧನೆಗೆ ಪಾತ್ರರಾಗಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು 30 ರನ್ಗಳಿಂದ ಜಯಿಸಿತ್ತು.