ಐಸಿಸಿ 2025 ರ ಮಹಿಳಾ ಏಕದಿನ ವಿಶ್ವಕಪ್ ಗೆಲುವಿನ ನಂತರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ (India) ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಭೇಟಿಯಾಗಿ ಅಭಿನಂದಿಸಿದರು. ಈಗ, ಪ್ರಧಾನಿ ಮೋದಿ ಅವರು ಭಾರತ ಅಂಧ ಮಹಿಳಾ ಕ್ರಿಕೆಟ್ (Cricket) ತಂಡವನ್ನೂ ಭೇಟಿಯಾಗಿದ್ದಾರೆ. ಬುಧವಾರ, ಮೋದಿ ಅವರು ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಉದ್ಘಾಟನಾ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ಅಂಧ ವನಿತೆಯರ ತಂಡ ವನ್ನು ಸನ್ಮಾನಿಸಿದರು. ಶ್ರೀಲಂಕಾದಲ್ಲಿ ನಡೆದ ಉದ್ಘಾಟನಾ ಅಂಧ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನೇಪಾಳ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಇತಿಹಾಸ ನಿರ್ಮಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ಟ್ರೋಫಿಯೊಂದಿಗೆ ಭಾರತ ತಂಡದ ಎಲ್ಲಾ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್ ಅನ್ನು ಸ್ವಾಗತಿಸಿದರು. ನರೇಂದ್ರ ಮೋದಿ ಭಾರತ ತಂಡದ ನಾಯಕಿ ದೀಪಿಕಾ ಮತ್ತು ಇತರ ಆಟಗಾರರೊಂದಿಗೆ ಮಾತನಾಡುತ್ತಾ ಅವರಿಗೆ ಸಿಹಿ ತಿನ್ನಿಸಿದರು. ತಂಡದ ಈ ಯಶಸ್ಸು ಪರಿಪೂರ್ಣ ಅಭಿಯಾನವನ್ನು ಪೂರ್ಣಗೊಳಿಸಿತು. ಭಾರತ ತಂಡವು ಟೂರ್ನಿಯುದ್ದಕ್ಕೂ ಅಜೇಯವಾಗಿ ಸಂಪೂರ್ಣ ಪ್ರಾಬಲ್ಯವನ್ನು ಪ್ರದರ್ಶಿಸಿತು.
ಅದ್ಭುತ ಚೇಸಿಂಗ್
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ನೇಪಾಳವನ್ನು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 114 ರನ್‌ಗಳಿಗೆ ಕಟ್ಟಿ ಹಾಕಿತು. ಭಾರತ ತಂಡದ ಚೇಸಿಂಗ್ ಅದ್ಭುತವಾಗಿತ್ತು. ಟೀಮ್ ಇಂಡಿಯಾ ವನಿತೆಯರು ಕೇವಲ 12.1 ಓವರ್‌ಗಳಲ್ಲಿ 47 ಎಸೆತಗಳು ಬಾಕಿ ಇರುವಾಗ ಗುರಿ ತಲುಪಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರೆ, ನೇಪಾಳವು ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ತಲುಪಿತು.
ಕ್ರೀಡೆಯ ಮನ್ನಣೆ-ಬೆಳವಣಿಗೆಗೆ ದಾರಿ
ಗುಂಪು ಹಂತದಲ್ಲಿ ಭಾರತ ಅಂಧ ಮಹಿಳಾ ತಂಡವು ಗೆಲುವಿನ ಹಾದಿಯಲ್ಲಿತ್ತು. ಗುಂಪು ಹಂತದಲ್ಲಿ ಭಾರತವು ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ, ಆಸ್ಟ್ರೇಲಿಯಾವನ್ನು 209 ರನ್‌ಗಳಿಂದ, ನೇಪಾಳವನ್ನು 85 ರನ್‌ಗಳಿಂದ, ಅಮೆರಿಕವನ್ನು 10 ವಿಕೆಟ್‌ಗಳಿಂದ ಮತ್ತು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿತು.