ಪಶ್ಚಿಮ ಬಂಗಾಳ: ಬಂಗಾಳದಲ್ಲಿ ನನ್ನನ್ನು ಟಾರ್ಗೆಟ್ ಮಾಡಿದರೆ, ಇಡೀ ದೇಶವನ್ನೇ ನಡುಗಿಸುತ್ತೇನೆ. ಚುನಾವಣೆ ಬಳಿಕ ರಾಷ್ಟ್ರವ್ಯಾಪಿ ಸಂಚರಿಸುತ್ತೇನೆ ಎಂದು ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯನ್ನ ವಿರೋಧಿಸಿ ಪಶ್ಚಿಮ ಬಂಗಾಳದ ಬೊಂಗಾನ್ನಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಚುನಾವಣಾ ಆಯೋಗ ‘ಬಿಜೆಪಿ ಆಯೋಗ’ ಆಗಿದೆ
ಕೇಂದ್ರ ಚುನಾವಣಾ ಆಯೋಗವು ‘ಬಿಜೆಪಿ ಆಯೋಗ’ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಂಭೀರ ಆರೋಪಗಳನ್ನ ಮಾಡಿದ್ರು. ನಿಜವಾದ ಮತದಾರರು ಭಯಪಡುವ ಅವಶ್ಯಕತೆ ಇಲ್ಲ ಬಿಜೆಪಿಯು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿದೆ. ಬಂಗಾಳದಲ್ಲಿ ಬಿಜೆಪಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಸರ್ಕಾರಿ ಸಂಸ್ಥೆಗಳು ಅಥವಾ ಸಂಪನ್ಮೂಲಗಳನ್ನು ಬಳಸಿದರೂ ಬಿಜೆಪಿಯ ತಂತ್ರಗಳು ಯಶಸ್ವಿಯಾಗುವುದಿಲ್ಲ ಎಂದು ಗುಡುಗಿದರು.
SIR ನಡೆಸಲು 3 ವರ್ಷಗಳಾದರು ಬೇಕಾಗುತ್ತದೆ. ಇದಕ್ಕೆ ನಾನು ಎಲ್ಲಾ ಸಹಕಾರಗಳನ್ನ ನೀಡುತ್ತೇನೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಎರಡು ತಿಂಗಳಲ್ಲಿ ಮಾಡಲು ಸಾಧ್ಯವಿಲ್ಲ. ಎಲ್ಲಾ ರೀತಿಯ ತಪ್ಪು ಡೇಟಾ ಕಲೆಹಾಕಲಾಗುತ್ತಿದೆ. ಹಿಂದೆ ಸರ್ಕಾರ ರಚಿಸುವವರು ಯಾರು ಎಂದು ಜನರು ನಿರ್ಧರಿಸುತ್ತಿದ್ದರು. ಆದ್ರೀಗ ಯಾರು ಮತ ಚಲಾಯಿಸಬೇಕು ಎಂದು ಸರ್ಕಾರ ನಿರ್ಧರಿಸುತ್ತಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್, ಬ್ಯಾಂಕ್ ದಾಖಲೆಗಳು ಇವ್ಯಾವುದಕ್ಕೂ ಮೌಲ್ಯವಿಲ್ಲ ಎಂದು ಹೇಳಿದರು.
2029ರಲ್ಲಿ ಬಿಜೆಪಿ ಸೋಲುತ್ತದೆ
ಮುಂದುವರೆದು ಮಾತನಾಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಮುಂದಿನ ವರ್ಷ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಜೊತೆಗೆ 2029ರಲ್ಲಿ ಅಧಿಕಾರದಿಂದ ಕೆಳಗಿಳಯಲಿದೆ. ದೆಹಲಿಯ ಚುಕ್ಕಾಣಿ ಹಿಡಿಯುವ ಧೈರ್ಯ ಬಂಗಾಳಕ್ಕೆ ಇದೆ ಎಂದು ಭವಿಷ್ಯ ಭವಿಷ್ಯ ನುಡಿದರು.